ಅಗಸ್ಟಾ ವೇಸ್ಟ್ ಲ್ಯಾಂಡ್ ಡೀಲ್ ನಲ್ಲಿ ಎಚ್ ಎಎಲ್ ಅನ್ನು ಕೈಬಿಟ್ಟಿರುವುದಕ್ಕೆ ರಾಹುಲ್ ಉತ್ತರಿಸಲಿ- ಶಾಸಕ ಕಾಮತ್
ಮಂಗಳೂರು: ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ಜೋಡಣೆಯನ್ನು ಎಚ್ ಎಎಲ್ ಸಂಸ್ಥೆಗೆ ನೀಡಲಿಲ್ಲ ಎಂದು ಈಗಿನ ಕೇಂದ್ರ ಸರಕಾರದ ಮೇಲೆ ಆರೋಪ ಹಾಕುತ್ತಿರುವ ರಾಹುಲ್ ಗಾಂಧಿಯವರು ಯುಪಿಎ ಅಧಿಕಾರದಲ್ಲಿದ್ದಾಗ ಅಗಸ್ಟಾ ವೇಸ್ಟ್ ಲ್ಯಾಂಡ್ ಡೀಲ್ ನಲ್ಲಿ ಎಚ್ ಎಎಎಲ್ ಅನ್ನು ಕೈಬಿಟ್ಟಿರುವುದು ಬಂಧಿತ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿರುವುದಕ್ಕೆ ಏನು ಹೇಳುತ್ತಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.
ಕ್ರಿಸ್ಟಿಯನ್ ಮೈಕೆಲ್ ಅಗಸ್ಟಾ ವೇಸ್ಟ್ ಲ್ಯಾಂಡ್ ಡೀಲ್ ನಲ್ಲಿ 225 ಕೋಟಿ ಕಮೀಷನ್ ಪಡೆದಿರುವ ಆರೋಪ ಎದುರಿಸುತ್ತಿದ್ದಾನೆ. ಈ ಹಗರಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಆತ ಪ್ರಸ್ತಾಪಿಸಿದ್ದಾನೆ. ಎಚ್ ಎಎಲ್ ಗೆ ಕೊಡಬೇಕಾಗಿದ್ದ ಗುತ್ತಿಗೆಯನ್ನು ಯುಪಿಎ ಸರಕಾರ ರದ್ದು ಮಾಡಿರುವುದನ್ನು ಹೇಳಿದ್ದಾನೆ. ರಫೇಲ್ ವಿಷಯದಲ್ಲಿ ಎಚ್ ಎಎಎಲ್ ಮೇಲೆ ವಿಪರೀತ ಪ್ರೀತಿಯನ್ನು ತೋರಿಸುತ್ತಿದ್ದ ರಾಹುಲ್ ಗಾಂಧಿ ತಮ್ಮ ಸರಕಾರ ಇದ್ದಾಗ ಯಾಕೆ ಎಚ್ ಎಎಲ್ ಗೆ ಕೊಡುವ ಒಪ್ಪಂದ ರದ್ದು ಮಾಡಿದ್ದರು. ಇದು ಗಾಂಧಿ ಕುಟುಂಬದ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ