ಅಗಸ್ಟ್ 10 ರಂದು ‘ಕತ್ತಲೆಕೋಣೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ
ಉಡುಪಿ: ಸತತ ಎರಡು ವರ್ಷಗಳ ಶ್ರಮದ ಪ್ರತಿಫಲವಾಗಿ ನಿರ್ಮಾಣಗೊಂಡಿರುವ ‘ಕತ್ತಲೆಕೋಣೆ’ಗೆ ಸದ್ಯ ಬೆಳಕಿನ ಆಗಮನವಾಗಲಿದೆ. ಇದೇ 10 ರಂದು ಇಡೀ ರಾಜ್ಯಾದ್ಯಂತ ಕತ್ತಲೆಕೋಣೆ ಚಿತ್ರ ಬಿಡುಗಡೆಯಾಗಲಿದೆ.
ಈ ಕುರಿತು ಮಾಧ್ಯಮಗಳಿಗೆ ಶುಕ್ರವಾರ ಮಾಹಿತಿ ನೀಡಿದ ಚಿತ್ರದಲ್ಲಿ ನಟಿಸಿರುವ ಹಾಗೂ ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅಶ್ವಥ್ ಆಚಾರ್ಯ, ಉಡುಪಿಯ ಕುಂದಾಪುರ ಮೂಲದ ಯುವ ಕಥೆಗಾರ, ವೃತ್ತಿಯಲ್ಲಿ ಪತ್ರಕರ್ತರಾಗಿರುವ ಸಂದೇಶ ಶೆಟ್ಟಿ ಆಜ್ರಿ ಸುಮಾರು 8 ವರ್ಷಗಳ ಹಿಂದೆ ಬರೆದ ಕಥೆಯೇ ಈಗ ಕತ್ತಲೆಕೋಣೆ ಚಿತ್ರವಾಗಿದೆ. ಬಹುತೇಕ ಹೊಸ ತಾರಾಗಣವಿರುವ ಚಿತ್ರಕ್ಕೆ ನೈಜ್ಯ ಕಥೆಯೇ ಜೀವಾಳ. ಸೈನಿಕನಾಗಬಯಸುವ ಹುಡುಗನ ಆಸೆ ಹೇಗೆ ಕಮರಿ ಹೋಯ್ತು, ಈ ವ್ಯವಸ್ಥೆ ಆತನ ಕನಸನ್ನೆ ದಾಳವಾಗಿಸಿಕೊಂಡು ಹೇಗೆ ಸೈಕೋ ಆಗಿ ಪರಿವರ್ತನೆಯಾಗುವಂತೆ ಮಾಡುತ್ತೆ ಎನ್ನುವ ಒಂದು ಸಣ್ಣ ಎಳೆಯಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ.
ಇದು ಸೈಕಾಲಾಜಿಕ್ ಹಾರರ್ ಥ್ರಿಲ್ಲರ್ ಸಿನಿಮಾ. ಇಲ್ಲಿ ಒಂದು ಕುಟುಂಬದ ಐಷಾರಾಮಿ ಜೀವನದ ಪರಿಚಯವಿದೆ, ವಿದ್ಯಾರ್ಥಿಯೋರ್ವನ ಕನಸಿದೆ, ಶಾಲಾ ಜೀವನದ ಚಿತ್ರಣವಿದೆ, ಪತ್ರಿಕೋದ್ಯಮದ ಎರಡು ಮುಖಗಳ ಪರಿಚಯವಿದೆ ಮತ್ತು ವ್ಯವಸ್ಥೆಯನ್ನು ಹೇಗೆ ದುಷ್ಟ ಶಕ್ತಿಗಳು ಬಳಸಿಕೊಳ್ಳುತ್ತದೆ ಅದಕ್ಕೆ ಪೂರಕವಾಗಿ ಪರಿಸರ ಹೇಗೆ ನಿರ್ಮಾಣವಾಗುತ್ತದೆ ಎನ್ನುವ ಸಂಪೂರ್ಣ ಚಿತ್ರಣ ಇದರಲ್ಲಿ ನೋಡಬಹುದಾಗಿದೆ.
ಬಹುತೇಕ ಶೇ. 85 ರಷ್ಟು ಚಿತ್ರೀಕರಣ ರಾತ್ರಿ ವೇಳೆಯಲ್ಲಿಯೇ ನಡೆದಿದೆ. ಚಿತ್ರ ನಿರ್ಮಾಣದ ವೇಳೆ ಸಾಕಷ್ಟು ಚಿತ್ರ ವಿಚಿತ್ರ ಘಟನೆಗಳು ನಡೆದಿವೆಯಂತೆ. ಕತ್ತಲೆಕೋಣೆ ಚಿತ್ರೀಕರಣ ನಡೆಸಿದ ಎಸ್ಟೇಟ್ನಲ್ಲಿ ಚಿತ್ರ ತಂಡ ಬಿಟ್ಟು ಯಾವುದೋ ಶಕ್ತಿ ಇರುವಂತೆ ಬಹುತೇಕರಿಗೆ ಅನುಭವ ನೀಡಿತ್ತಂತೆ. ರಾತ್ರಿ ವೇಳೆ ಶೂಟಿಂಗ್ ನಡೆಸುವಾಗ ಸೆಟ್ನಲ್ಲಿ ಹಾಕಿದ್ದ ಎಲ್ಲ ಲೈಟ್ ತನ್ನಷ್ಟಕ್ಕೆ ದಿಗ್ಗನೇ ಬೆಳಗಿಕೊಳ್ಳುವುದು, ಅಚಾನಕ್ ಆಗಿ ಸದೃಢವಾಗಿ ಬೆಳೆದು ನಿಂತಿದ್ದ ಮರ ಧರೆಗುರುಳಿದ್ದು, ಮರವೇರಿದ ನಟ ಅಂತಿಮ ಶಾಟ್ ಮುಗಿಯುವ ಮುನ್ನವೆ ನೆಲಕ್ಕೆ ಬಿದ್ದಿದ್ದು, ಹೊಸ ಜನರೇಟರ್ ಸುಟ್ಟು ಹೋಗಿದ್ದು, ಕರೆಂಟ್ ಇಲ್ಲದೇ ಇದ್ದರು ಫ್ಯಾನ್ ತಿರುವುದು ಹೀಗೆ ಪಟ್ಟಿ ಮಾಡಿದರೆ ಸಾಕಷ್ಟು ವಿಚಿತ್ರ ಘಟನೆಗಳು ಚಿತ್ರೀಕರಣದ ವೇಳೆ ಘಟಿಸಿವೆಯಂತೆ.
ಸಂದೇಶ್ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ನಿರ್ದೇಶಕನಾಗುವ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಮುಂಬೈ ಕನ್ನಡತಿ ಹೇನಿಕಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪಿ.ಆರ್.ಅಮೀನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀನಿವಾಸ ಶಿವಮೊಗ್ಗ ಸಹ ನಿರ್ಮಾಪಕರಾಗಿದ್ದಾರೆ. ಆರ್.ಕೆ. ಮಂಗಳೂರು ಛಾಯಾಗ್ರಹಣ, ಸಹ ನಿರ್ದೇಶನದಲ್ಲಿ ಜೀತ್ ಜೋಸೆಫ್ ಸಾತ್ ನೀಡಿದ್ದಾರೆ. ಅರುಣ್ ರಾಜ್ ಸಂಗೀತ, ಅಶೋಕ್ ನೀಲಾವರ ಮತ್ತು ನಾಗರಾಜ್ ರಾವ್ ಅವರ ಸಾಹಿತ್ಯ ಚಿತ್ರಕ್ಕೆ ಜೀವ ನೀಡಿದೆ. ಮುಖ್ಯ ಭೂಮಿಕೆಯಲ್ಲಿ ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ್, ಅಶ್ವಥ್ ಆಚಾರ್ಯ, ರಘು ಪಾಂಡೇಶ್ವರ, ಸುನಿಲ್ ಉಪ್ಪುಂದ, ರೋಹಿತ್ ಅಂಪಾರ್, ಚಂದ್ರ ವಸಂತ, ಚಿತ್ರಕಲಾ ರಾಜೇಶ್, ಶ್ರೀನಿವಾಸ್ ಪೈ, ಮಂಜುನಾಥ್ ಸಾಲಿಯನ್, ನಾಗರಾಜ್ ರಾವ್ ನಟಿಸಿದ್ದಾರೆ.
ಚಿತ್ರದ ಇನ್ನೊಂದು ವಿಶೇಷತೆ ಎಂದರೆ, ಸರಿಗಮಪದ ರನ್ನರ್ ಅಪ್ ಮೆಹಬೂಬ್ ಸಾಬ್ ಹಾಡಿದ ‘ಒಂಟಿ ಕಾನನದಿ ನೀ’ ಸಾಂಗ್ ಯೂ ಟ್ಯೂಬ್ನಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು, ಸುಮಾರು 2.2 ಮಿಲಿಯನ್ ವಿವ್ಯೂ ಆಗಿದೆ. ಅಶೋಕ್ ನೀಲಾವರ್ ಸಾಹಿತ್ಯದ ‘ಕಾಡುತಿಹೆ’ ಎನ್ನುವ ರೊಮ್ಯಾಂಟಿಕ್ ಸಾಂಗ್ ಮತ್ತು ಕನ್ನಡ ನಾಡಿನ ಕುರಿತಾದ ಜರ್ನಿ ಗೀತೆ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿವೆ. ಹಾಡಿಗೆ ತಕ್ಕುದಾದ ಸಂಗೀತವನ್ನು ಅರುಣ್ ರಾಜ್ ನೀಡಿದ್ದಾರೆ. ಇಷ್ಟೆಲ್ಲ ವಿಶೇಷತೆಯಿಂದ ಕೂಡಿರುವ ಕತ್ತಲೆಕೋಣೆ ಚಿತ್ರ ಇದೇ ಆಗಸ್ಟ್ 10ರಂದು ಬಿಡುಗಡೆಯಾಗುತ್ತಿದೆ.