ಅಗಸ್ಟ್ 15ರಂದು ಕಲ್ಮಾಡಿ ಚರ್ಚಿನಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ
ಉಡುಪಿ: ಕಲ್ಮಾಡಿ ವೆಲಂಕಣಿ ಮಾತೆ ಚರ್ಚಿನ ವಾರ್ಷಿಕ ಪ್ರತಿಷ್ಠಾಪನೆ ಮಹೋತ್ಸವ ಅಗೋಸ್ತ್ 15 ರಂದು ವಿಜೃಂಭಣೆಯಿಂದ ನಡೆಯಲಿರುವುದು ಎಂದು ಚರ್ಚಿನ ಧರ್ಮಗುರು ವಂ| ಆಲ್ಬನ್ ಡಿಸೋಜಾ ಹೇಳಿದರು.
ಅವರು ಶನಿವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಮೊಟ್ಟಮೊದಲ ಮತ್ತು ಭಾರತದಲ್ಲಿ ಎರಡನೆಯ ಮತ್ತು ಇಡೀ ಏಷ್ಯದಲ್ಲಿ ಮೂರನೆಯ ಹಡಗಿನಾಕಾರದ ಸ್ಟೆಲ್ಲಾ ಮಾರಿಸ್ ಚರ್ಚ್ ಜನವರಿ 6, 2018 ರಂದು ಉದ್ಘಾಟನೆಗೊಂಡಿತ್ತು. ಪ್ರತಿವರ್ಷದಂತೆ ಈ ಬಾರಿಯೂ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವವು ಆಗೋಸ್ಟ್ 15 ರಂದು ವಿಜೃಂಭಣೆಯಿಂದ ನಡೆಯಲಿರುವುದು. ಈ ಉತ್ಸವದ ಪೂರ್ವಭಾವಿಯಾಗಿ ಆಗೋಸ್ತ್ 6 ರಿಂದ ಆಗೋಸ್ತ್ 14 ರ ತನಕ ನೊವೇನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ನಡೆಯಲಿರುವುದು. ಈ 9 ದಿನಗಳ ನೊವೇನಾ ಸಮಯದಲ್ಲಿ ವಿಶೇಷ ಉದ್ಧೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ಮಾಡಲಾಗುವುದು. ಪ್ರತಿಸ್ಟಾಪನೋತ್ಸವದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.
ಆಗೋಸ್ಟ್ 6 ರಂದು ಸಾಯಂಕಾಲ 3-45 ಗಂಟೆಗೆ ನೊವೇನಾ ಚಾಲನೆ – ಚಾಲನೆ ನೀಡುವವರು ಸಂತಾ ಜೊಸೆಫ್ ಸೆಮಿನರಿ, ಮಂಗಳೂರು ಇದರ ರೆಕ್ಟರ್ರಾಗಿರುವ ಅತೀ ವಂದನೀಯ ಸ್ವಾಮಿ ರೊನಾಲ್ಡ್ ಸೆರಾವೊ, ತದನಂತರ 4 ಗಂಟೆಗೆ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆ ನಡೆಯಲಿರುವುದು.
ಅಗೋಸ್ಟ್ 14 ರಂದು ಮಧ್ಯಾಹ್ನ 2.45 ಕ್ಕೆ ಆದಿಉಡುಪಿ ಜಂಕ್ಷನ್ (ರೀಗಲ್ ನೆಕ್ಸ್ಟ್ ಅಪಾಟ್ಮೆಂಟ್ ಎದುರು) ನಿಂದ ಕಲ್ಮಾಡಿ ಚರ್ಚ್ ವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿರುವುದು. ತೇರಿನ ಮೆರವಣಿಗೆ ಚಾಲನೆ ನೀಡುವವರು ಸನ್ಮಾನ್ಯ ಐವನ್ ಡಿಸೋಜ, ವಿಧಾನ ಪರಿಷತ್ ಶಾಸಕರು, ಕರ್ನಾಟಕ ಸರ್ಕಾರ, ತದನಂತರ 4 ಗಂಟೆಗೆ ಪ್ರಾರ್ಥನಾ ಮತ್ತು ಬಲಿಪೂಜೆಯನ್ನು ನೆರವೇರಿಸಲಿರುವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಪರಮಪೂಜ್ಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನರವರು
ಅಗೋಸ್ತ್ 15 ರಂದು ಬೆಳಿಗ್ಗೆ 4 ಗಂಟೆಗೆ ಸಾಂಭ್ರಮಿಕ ಬಲಿಪೂಜೆ ನಡೆಯಲಿರುವುದು. ಈ ದಿನದಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ/ವಂ/ಡಾ/ ಜೆರಾಲ್ಡ್ ಐಸಾಕ್ ಲೋಬೋ ರವರು ಪಾಲ್ಗೊಳ್ಳಲಿರುವರು. ಆ ದಿನದಂದು ಬೆಳಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ನಡೆಯಲಿದ್ದು ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವು ನಡೆಯಲಿರುವುದು. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷ್ ನಲ್ಲಿ ದಿವ್ಯ ಬಲಿಪೂಜೆಗಳು ನಡೆಯಲಿರುವುದು.
ಬಲಿಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ದೇವಾಲಯವು ಸರ್ವಧರ್ಮದ ಐಕ್ಯತೆಯ ಪುಣ್ಯಕ್ಷೇತ್ರವಾಗಿದೆ. ಜಾತಿಮತಭೇದವಿಲ್ಲದೆ ಸಹಸ್ರಾರು ಭಕ್ತಾದಿಗಳು ಬಂದು ತಮ್ಮ ಕಷ್ಟ – ದುಖಃಗಳನ್ನು, ಸಮಸ್ಯೆಗಳನ್ನು, ರೋಗಗಳನ್ನು ವೆಲಂಕಣಿಮಾತೆಗೆ ಸಮರ್ಪಿಸಿ ಶೃದ್ದೆಯಿಂದ ಬೇಡುತ್ತಾರೆ. ಸರ್ವಧರ್ಮದ ಐಕ್ಯತೆಯ ಸಂಕೇತವಾಗಿ ‘ಮಾನಸ್ತಂಭ’ (ಕೊಡಿಮರ) ವನ್ನು ಪ್ರಾಯೋಜಕರ ಸಹಾಯದಿಂದ ನಿರ್ಮಿಸಿದ್ದೇವೆ. ಇನ್ನೊಂದು ವಿಶೇಷವೆಂದರೆ ಶ್ರೀ ಉಮೇಶ್ ಕಿದಿಯೂರು ಇವರ ಮನೆಯಲ್ಲಿ ವೆಲಂಕಣಿಮಾತೆಯ ಇತಿಹಾಸವಿರುವ ಪವಾಡ ಮೂರ್ತಿಯನ್ನು ಇಟ್ಟು ಅವರು ನಿಗೂಡವಾಗಿ ಪೂಜಿಸುತ್ತಿದ್ದರು. ಒಂದು ದಿನ ಅವರಿಗೆ ಕನಸಿನಲ್ಲಿ ಈ ಮಾತೆಯನ್ನು ಮನೆಯಲ್ಲಿಟು ಪೂಜಿಸುವುದು ಸರಿಯಲ್ಲ. ಆ ಮೂರ್ತಿಯನ್ನು ಒಂದು ಯೋಗ್ಯವಾದ ಸ್ಥಳದಲ್ಲಿ ಅಂದರೆ ಸಹಸ್ರಾರು ಜನರಿಗೆ ಒಳ್ಳೆಯದಾಗುವ ಪವಿತ್ರಸ್ಥಳದಲ್ಲಿ ಪ್ರತಿಸ್ಟಾಪಿಸಬೇಕೆಂದು ದಿವ್ಯವಾಣಿಯನ್ನು ಕೇಳುತ್ತಾರೆ. ಅದರಂತೆ ಉಮೇಶ್ ರವರಿಗೆ ಕಲ್ಮಾಡಿ ದೇವಾಲಯವು ಸರ್ವಧರ್ಮದ ಒಂದು ಕೊಂಡಿಯೆಂದು ಮನವರಿಕೆಯಾಗಿ, ಧರ್ಮಗುರುಗಳೊಡನೆ ಸಮಾಲೋಚನೆ ನಡೆಸಿ ಅವರ ಒಪ್ಪಿಗೆಯ ಮೇರೆಗೆ ಆ ಪವಾಡ ಮೂರ್ತಿಯನ್ನು ಇವರ ಮನೆಯಲ್ಲಿ ಆಶೀರ್ವಾಚಿಸಿ ವಿಜಂಭೃಣೆಯ ಮೆರವಣಿಗೆಯೊಂದಿಗೆ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದಲ್ಲಿ ಅಕ್ಟೊಬರ್ 21, 2018 ರಲ್ಲಿ ಪ್ರತಿಸ್ಟಾಪಿಸಲಾಯಿತು. ಪವಾಡಗಳು ದಿನದಿಂದ ದಿನಕ್ಕೆ ಹೆಚ್ಚಾಗಿ, ಹಲವಾರು ಸಾಕ್ಷಿಗಳನ್ನು ಭಕ್ತಾದಿಗಳು ನೀಡಿದ್ದಾರೆ. ಆ ಸಾಕ್ಷಿ ಆಧಾರಗಳನ್ನು ಭಕ್ತಾದಿಗಳು ದೇವಾಲಯದ ಕಚೇರಿಗೆ ತಲುಪಿಸಿದ್ದಾರೆ.
ಈ ಪುಣ್ಯಕ್ಷೇತ್ರವು ಇನ್ನು ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ವೆಲಂಕಣಿಮಾತೆಯ ಪುಣ್ಯಕ್ಷೇತ್ರವೆಂದು ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ. ಇದಕ್ಕಾಗಿ ರಚಿಸಬೇಕಾಗಿದ್ದ 18 ದಾಖಲೆಗಳನ್ನು ರಚಿಸಿ ನಮ್ಮ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನೀಡಲಾಗಿದೆ. ಖಂಡಿತವಾಗಿಯೂ ಆ ಶುಭದಿನ ಹತ್ತಿರದಲ್ಲಿದೆ ಎಂದು ಭಾಸವಾಗುತ್ತಿದೆ.