ಅಗಸ್ಟ್ 23-24 ರಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ
ಉಡುಪಿ: ಪ್ರತಿವರ್ಷದಂತೆ ಈ ವರ್ಷವೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಆಚರಿಸಲಾಗುವುದು. ಆ.23 ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ತಿಳಿಸಿದರು.
ಕನಕ ಮಂಟಪದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, 23ರಂದು ಮಧ್ಯರಾತ್ರಿ 12.12ಕ್ಕೆ ಚಂದ್ರೋದಯ ಕಾಲಕ್ಕೆ ಕೃಷ್ಣನಿಗೆ ಮಹಾಪೂಜೆ ನೆರವೇರಿಸಿ ಅರ್ಘ್ಯಪ್ರದಾನ ಮಾಡಲಾಗು ವುದು. ಚಂದ್ರನಿಗೂ ತುಳಸಿ ವೇದಿಕೆ ಸಮೀಪ ಅರ್ಘ್ಯ ಪ್ರದಾನ ನಡೆಯಲಿದೆ ಎಂದರು.
24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಬೆಳಿಗ್ಗೆ ಮಹಾಪೂಜೆಯ ಬಳಿಕ ಭಕ್ತರಿಗೆ ಕೃಷ್ಣನ ಪ್ರಸಾದ ವಿತರಣೆ ಮಾಡಲಾಗುವುದು. ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವ ನಡೆಯಲಿದೆ. ಸದ್ಯ ಚಾತುರ್ಮಾಸ್ಯ ಇರುವ ಕಾರಣ ಮೂಲದೇವರನ್ನು ಹೊರಗೆ ತರುವಂತಿಲ್ಲ. ಹಾಗಾಗಿ, ಕೃಷ್ಣನ ಮೃಣ್ಮಯ ಮೂರ್ತಿಯನ್ನು ಬಂಗಾರದ ರಥದಲ್ಲಿ ಕೂರಿಸಿ ರಥಬೀದಿಯಲ್ಲಿ ಉತ್ಸವ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಸಂಜೆ ರಾಜಾಂಗಣದಲ್ಲಿ ಹುಲಿ ವೇಷ ಕುಣಿತ ನಡೆಯಲಿದ್ದು, ಬಹುಮಾನ ನೀಡಲಾಗುವುದು. ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಗುವುದು. ಜತೆಗೆ, ಶಾಲೆಗೆ ಲಡ್ಡು ಮತ್ತು ಚಕ್ಕುಲಿಯನ್ನು ತಲುಪಿಸಲಾಗುವುದು ಎಂದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಭಜನೆ, ಪಾರಾಯಣ, ಲಕ್ಷಾರ್ಚನೆ, ಮಹಾಪೂಜೆ, ಲಡ್ಡು ಸೇವೆ, ರಾತ್ರಿಪೂಜೆ, ಪ್ರವಚನಗಳು ನಡೆಯಲಿವೆ.
ಆ.3 ರಿಂದ, 24 ರವರಿಗೆ ವಿವಿಧ ಸ್ಪರ್ಧೆ ಹಾಗೂ ಜಾನಪದ ವೇಷ ಸ್ಪರ್ಧೆ ನಡೆಯಲಿದೆ ಎಂದು ಪಲಿಮಾರು ಶ್ರೀಗಳು ಮಾಹಿತಿ ನೀಡಿದರು.
18ರಂದು ಶಮಾ ಕೃಷ್ಣ ಹಾಗೂ ಶ್ರದ್ಧಾ ಅವರಿಂದ ಸರ್ವಂ ಕೃಷ್ಣಮಯಂ, 19ರಂದು ಫಯಾಜ್ ಖಾನ್ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, 20ರಂದು ಟಿ.ವಿ.ಶಂಕರನಾರಾಯಣ ಅವರ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 21ರಂದು ದಿಲೀಪ್ ಹಾಗೂ ಸಂಗೀತಾ ಅವರ ತಂಡದಿಂದ ವಯಲಿನ್, 22ರಂದು ಮುದ್ದು ಮೋಹನ್ ತಂಡದಿಂದ ಹಿಂದೂಸ್ಥಾನಿ ಸಂಗೀತ, 23ರಂದು ರಾಜ್ಕಮಲ್ ನಾಗರಾಜ್ ಹಾಗೂ ಸಮೀರ್ ರಾವ್ ಅವರ ತಂಡದಿಂದ ಕರ್ನಾಟಕಿ ಹಾಗೂ ಹಿಂದೂಸ್ಥಾನಿ ಕೊಳಲು ವಾದನ ಜುಗಲ್ಬಂದಿ ನಡೆಯಲಿದೆ ಎಂದರು.