ಅಗ್ನಿಶಾಮಕ ಸಿಬ್ಬಂದಿಗೆ ಸೂಕ್ತ ಪ್ರೋತ್ಸಾಹ : ಸಚಿವ ಬೊಮ್ಮಾಯಿ

Spread the love

ಅಗ್ನಿಶಾಮಕ ಸಿಬ್ಬಂದಿಗೆ ಸೂಕ್ತ ಪ್ರೋತ್ಸಾಹ : ಸಚಿವ ಬೊಮ್ಮಾಯಿ

ಬೈಂದೂರು: ತುರ್ತು ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಸರ್ಕಾರ ಗುರುತಿಸಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ನೀಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಮಂಗಳವಾರ, ಬೈಂದೂರಿನಲ್ಲಿ ನೂತನ ಅಗ್ನಿಶಾಮಕ ಠಾಣೆಯ ತಾತ್ಕಾಲಿಕ ಕಟ್ಟಡವನ್ನು ವರ್ಚವಲ್ ವೇದಿಕೆ ಮೂಲಕ, ಬೆಂಗಳೂರಿನಿಂದ ಉದ್ಘಾಟಿಸಿ ಮಾತನಾಡಿದರು.

ಈ ಬಾರಿಯ ರಾಜ್ಯ ಬಜೆಟ್ನಲ್ಲಿ ರಾಜ್ಯದಲ್ಲಿ 10 ಅಗ್ನಿಶಾಮಕ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಒಟ್ಟು 25 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದ್ದು, ಈ 10 ಠಾಣೆಗಳಲ್ಲಿ ಬೈಂದೂರು ಠಾಣೆ ಸಹ ಒಂದು, ಇಲಾಖೆಯಲ್ಲಿ ಖಾಲಿ ಇರುವ 2842 ಹುದ್ದೆಗಳ ಪೈಕಿ 1567 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸ್ಯಾನಿಟೈಜೇಷನ್ ಮಾಡುವ ಕಾರ್ಯದಲ್ಲಿ ಇಲಾಖೆ ಯಶಸ್ವಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇಲಾಖೆಗೆ 25 ತುರ್ತು ವಾಹನಗಳು ಹಾಗೂ 90 ಮೀಟರ್ ಎತ್ತರದ ಏಣಿ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಉಡುಪಿ, ಮಲ್ಪೆ, ಕಾರ್ಕಳ ಮತ್ತು ಕುಂದಾಪುರದಲ್ಲಿ ಅಗ್ನಿಶಾಮಕ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, ಬೈಂದೂರಿನ ಠಾಣೆ 5 ನೆ ಯದಾಗಿದ್ದು, ಈ ಠಾಣೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 29 ಹುದ್ದೆಗಳು ಮಂಜೂರಾಗಿದ್ದು, ಈಗಾಗಲೇ 14 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, 2.50 ಕೋಟಿ ವೆಚ್ಚದಲ್ಲಿ 1 ಎಕರೆಯಲ್ಲಿ ಅಗ್ನಿಶಾಮಕ ಠಾಣೆ ಮತ್ತು ವಸತಿಗೃಹ ನಿರ್ಮಿಸಲಾಗುತ್ತಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಥ್, ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.


Spread the love