ಅಡಿಕೆ ಬೆಳೆಗಾರರಿಗೆ ಮೋಸ ಮಾಡಿದ ಬಿಜೆಪಿ: ರಮೇಶ್ ಹೆಗ್ಡೆ
ಅಜ್ಜಂಪುರ: ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ವರದಿ ನೀಡಿ ಆಡಿಕೆ ಬೆಳೆಗಾರರ ಬದುಕಿಗೆ ವಿಷವನುಣಿಸಿದ್ದು ಬಿಜೆಪಿ ಸರಕಾರ, ಜಯಪ್ರಕಾಶ್ ಹೆಗ್ಡೆ ಅವರಂಥ ಜನಪರ ಕಾಳಜಿ ಇರುವವರಿಂದ ಅಡಿಕೆಗೆ ಇಂದು ಉತ್ತಮ ಬೆಲೆ ಸಿಗಲು ಕಾರಣವಾಯಿತು, ಈ ಬಗ್ಗೆ ಸವಾಲೆಸೆಯುವವರು ಯಾರಾದರೂ ಇದ್ದರೆ ಮುಕ್ತ ಚರ್ಚೆಗೆ ಬರಬಹುದು. ಕ್ವಿಂಟಾಲ್ಗೆ ಹತ್ತು ಸಾವಿರವಿದ್ದ ಅಡಿಕೆ ಬೆಲೆ ಇಂದು ಐವತ್ತರ ಗಡಿ ದಾಟಿದೆ, ಒಬ್ಬ ಜನಪ್ರತಿನಿಧಿ ತೋರಿದ ಕಾಳಜಿಯಿಂದ ಇದು ಸಾಧ್ಯವಾಯಿತು,” ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಹೇಳಿದ್ದಾರೆ.
ಅವರು ಭಾನುವಾರ ಅಜ್ಜಂಪುರ ತಾಲೂಕಿನ ಶ್ಯಾನುಭೊಗರ ಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. “ಜಯಪ್ರಕಾಶ್ ಹೆಗ್ಡೆ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಅಡಿಕೆ ಬೆಳೆಗಾರರು ಇಂದು ಜೆಪಿ ಹೆಗ್ಡೆ ಅವರ ಕಾರ್ಯಸಾಧನೆಯನ್ನು ಮೆಚ್ಚುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಗೆಲ್ಲುವುದು ಖಚಿತವಾಗಿದೆ. ಇದನ್ನು ಸಹಿಸಲಾಗದವರು ಅವರ ಕಾರ್ಯಗಳನ್ನು ತಮ್ಮ ಕಾರ್ಯಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ವೈಫಲ್ಯಗಳನ್ನೇ ಹೊದ್ದು ಮಲಗಿರುವ ಬಿಜೆಪಿ ಪಕ್ಷಕ್ಕೆ ಈಗ ಹೇಳಿಕೊಳ್ಳಲು ಏನೂ ಉಳಿದಿಲ್ಲ. ಇನ್ನೊಬ್ಬರು ಮಾಡಿದ ಕಾರ್ಯಗಳನ್ನು ತನ್ನ ಕಾರ್ಯವೆಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ಪ್ರಜ್ಞಾವಂತ ನಾಗರಿಕರಿಗೆ ಈ ಬಗ್ಗೆ ಅರಿವಿದೆ,” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, “ಅಡಿಕೆ ಬೆಳೆಗಾರರಿಗೆ ನ್ಯಾಯ ದೊರಕಿಸಿರುವ ಬಗ್ಗೆ ತೃಪ್ತಿ ಇದೆ. ಈ ಬಗ್ಗೆ ದಾಖಲೆಗಳೇ ಹೇಳುತ್ತಿವೆ. ನೀಡಿದ ವರದಿಯಲ್ಲಿ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬ ಸುಳ್ಳು ಸುದ್ದಿ ಹರಡಿದವರು ಯಾರೆಂಬು ಎಲ್ಲರಿಗೂ ತಿಳಿದಿದೆ. ಈ ಭಾಗದ ಜನರು ತೋರುತ್ತಿರುವ ಪ್ರೀತಿ, ಅವರಲ್ಲಿರುವ ಆತ್ಮವಿಶ್ವಾಸ ಎಲ್ಲವನ್ನೂ ಹೇಳುತ್ತಿದೆ,” ಎಂದು ಹೆಗ್ಡೆ ಈ ಸಂದರ್ಭದಲ್ಲಿ ಹೇಳಿದರು.
ನೀರಿನ ಸಮಸ್ಯೆಗೆ ಪರಿಹಾರ: ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯ ಇದೆ. ಜನರು ಮತ ಕೇಳುವಾಗ ತಾವು ಕಳೆದ ಹತ್ತು ವರ್ಷಗಳಿಂದ ಅನುಭವಿಸಿದ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ಮತಯಾಚನೆಯ ವೇಳೆ ಊರಿನ ಹಿರಿಯರೊಬ್ಬರು ಜಯಪ್ರಕಾಶ್ ಹೆಗ್ಡೆ ಅವರನ್ನು ನೀರಿನ ಸೌಲಭ್ಯ ಒದಗಿಸುವಂತೆ ಕೇಳಿಕೊಂಡರು. ಆಗ ವಾಹನದ ಮೇಲೆ ನಿಂತು ಪ್ರಚಾರ ಮಾಡುತ್ತಿದ್ದ ಹೆಗ್ಡೆ ಅವರು ಕೆಳಕ್ಕೆ ಇಳಿದು, ರಾಜಣ್ಣ ಎಂಬವರೊಂದಿಗೆ ಮಾತನಾಡಿ, “ಯಾವ ಸಮಸ್ಯೆಗೆ ಮೊದಲ ಆದ್ಯತೆ ಕೊಡಬೇಕೆಂಬ ಅರಿವಿದೆ. ಊರಿನ ಪ್ರಮುಖರು ಹಾಗೂ ನಿಮ್ಮನ್ನೂ ಕೂಡಿಸಿಕೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ, ನಾವು ಸುಳ್ಳು ಆಶ್ವಾಸನೆಗಳನ್ನು ನೀಡಿ ನಿಮ್ಮಿಂದ ಓಟು ಸುಲಿಯುವುದಕ್ಕೆ ಬಂದಿಲ್ಲ. ಬದಲಾಗಿ ನಿಮ್ಮ ಬದುಕಿಗೆ ನೆರವಾಗಲು ಬಂದಿರುವೆ. ಇದು ನನ್ನ ಕರ್ತವ್ಯ ಹೊರತು ನಿಮಗೆ ಮಾಡುವ ಸೇವೆಯಲ್ಲ,” ಎಂದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಮಾತನಾಡಿ, “ಕಾಂಗ್ರೆಸ್ ಸರಕಾರ ನೀಡಿರುವ ಉಚಿತ ಯೋಜನೆಗಳಿಂದ ರಾಜ್ಯದ ಬಡವರಿಗೆ ಉತ್ತಮ ರೀತಿಯಲ್ಲಿ ನೆರವಾಗಿದೆ, ಮತ ಯಾಚನೆ ಮಾಡುವಾಗ ಜನ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಇಲ್ಲಿಂದ ಕಾಲ್ಕಿತ್ತ ಶೋಭ ಕರಂದ್ಲಾಜೆ ಅವರನ್ನು ಜನ ಪ್ರಶ್ನಿಸುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಶೋಭ ಕರಂದ್ಲಾಜೆ ಅವರನ್ನು ಒಮ್ಮೆಯೂ ನೋಡದವರು ಈ ಬಾರಿ ಬಿಜೆಪಿಗೆ ಮತ ನೀಡದಿರಲು ತೀರ್ಮಾನಿಸಿದ್ದಾರೆ. ನಮಗೆ ಕಾಂಗ್ರೆಸ್ ಸರಕಾರ ಪ್ರತಿಭಾವಂತ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಆದ್ದರಿಂದ ಕ್ಷೇತ್ರದ ಜನರೆಲ್ಲ ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡಿ ಜವಾಬ್ದಾರಿಯುತ ಜನಪ್ರತಿನಿಧಿಯನ್ನು ಡೆಲ್ಲಿಗೆ ಕಳುಹಿಸೋಣ,” ಎಂದರು.