Home Mangalorean News Kannada News ಅತಿ ವಿರಳ ಜೇಡ ಪ್ರಬೇಧ ಭಾರತದಲ್ಲಿ ಪತ್ತೆ

ಅತಿ ವಿರಳ ಜೇಡ ಪ್ರಬೇಧ ಭಾರತದಲ್ಲಿ ಪತ್ತೆ

Spread the love

ಅತಿ ವಿರಳ ಜೇಡ ಪ್ರಬೇಧ ಭಾರತದಲ್ಲಿ ಪತ್ತೆ

ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವಿರಳವಾದ ಜಿಗಿಯುವ ಜೇಡ ಪ್ರಬೇಧ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ನೊಬೆರೆಟಸ್ ಎಂಬ ಜೇಡ ಪ್ರಬೇಧವನ್ನು ಮುಂಬಯಿ ಮೂಲದ ಭಾರತೀಯ ಸಂಶೋಧಕರು ಪತ್ತೆ ಮಾಡಿದ್ದು, ಈ ತಂಡದಲ್ಲಿ ಮೂಡಬಿದಿರೆಯ ನಿಸರ್ಗಪ್ರೇಮಿ ವೈದ್ಯರಾದ ಡಾ.ಕೃಷ್ಣ ಮೋಹನ್ ಕೂಡ ಸದಸ್ಯರಾಗಿದ್ದಾರೆ.

ಇತರ ಕೀಟಗಳ ಮೊಟ್ಟೆಗಳನ್ನು ಕದ್ದು ತಿನ್ನುವ ಈ ಚಿಕ್ಕದಾದ ಜಿಗಿಯುವ ಜೇಡ ಮೊದಲಿಗೆ ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಪೂರ್ವ ಏಷ್ಯಾ ಪ್ರದೇಶದಲ್ಲಿ ಕಂಡುಬಂದಿತ್ತು. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಇಂತಹ ವಿರಳ ಜೇಡ ಪ್ರಬೇಧ ಪತ್ತೆಯಾಗಿದ್ದು, ಅವುಗಳ ಶರೀರ ಕೇವಲ 2.5ಮಿಮೀನಿಂದ 3.5ಮಿ.ಮೀಟರಿನಷ್ಟಿದೆ. ಚಿಕ್ಕದಾಗಿಯೂ ಅಷ್ಟೊಂದು ಆಕರ್ಷಕವಾಗಿಯೂ ಇಲ್ಲದಿರುವ ಈ ಜೇಡ ಪ್ರಬೇಧದ ಜೈವಿಕ ಇತಿಹಾಸ, ಗುಣಸ್ವಭಾವ, ವಾಸಪ್ರದೇಶ ಇತ್ಯಾದಿಗಳ ಅಧ್ಯಯನ ಆಗಿಲ್ಲ.

ಜಿಗಿದಾಡುವ ಜೇಡ ಪ್ರಬೇಧಗಳ ಬಗ್ಗ ಮೀಸಲಾಗಿರುವ ವಿಜ್ಞಾನ ಪ್ರಕಟಣೆ ಪೀಕಾಮಿಯದಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಸಂಶೋಧನೆಯನ್ನು ವಿಶ್ವದಲ್ಲಿ ಜೇಡ ಪ್ರಬೇಧಗಳ ಬಗ್ಗೆ ತಜ್ಞರಾಗಿರುವ ಡಾ.ಡೆವಿಡ್ ಇ.ಹಿಲ್ ನತ್ತು ಬ್ರಿಟನಿನ ಜೇಡ ಸಂಶೋಧಕ ಡಾ.ರಿಚರ್ಡ್ ಜೆ.ಪಿಯರ್ಸ್ ಅವರು ಅನುಮೋದಿಸಿದ್ದಾರೆ. ಸಂಶೋಧನ ಲೇಖನವು ಪ್ರಧಾನ ಲೇಖಕ ಮತ್ತು ಸಂಶೋಧಕ ಜಾವೆದ್ ಆಹ್ಮದ್, ಸಹಸಂಶೋಧಕರಾದ ರಾಜಶ್ರೀ ಖಲಾಪ್ ಮತ್ತು ಡಾ.ಕೃಷ್ಣ ಮೋಹನ್ ರಾವ್ ಅವರ ಹೆಸರಿನಲ್ಲಿ ಪ್ರಕಟವಾಗಿದೆ.

ವನ್ಯಜೀವಿ ಛಾಯಾಗ್ರಾಹಕ ಇಂದ್ರಾಣಿಲ್ ಬ್ಯಾನರ್ಜಿ ಈ ಚಿಕ್ಕದಾದ ಜೇಡ ಹುಳುವನ್ನು ಪಶ್ಚಿಮ ಬಂಗಾಲದ ಹಣ್ಣಿನ ತೋಟಗಳಲ್ಲಿ ಸೆರೆಹಿಡಿದಿದ್ದರು. ಒಣಗಿದ ಬಾಳೆ ಎಲೆಗಳ ಮರೆಯಲ್ಲಿ ಇವುಗಳ ವಾಸವಾಗಿತ್ತು.

ನೊಬೆರೆಟಸ್ ಪ್ರಬೇಧವು ಸ್ಪರ್ಟೆನಿಯ ಉಪ ಪಂಗಡಕ್ಕೆ ಸೇರಿದಾಗಿದ್ದು, ವಿಶಿಷ್ಟವಾದ ಜಿಗಿಯುವ ಜೇಡ ಹುಳುಗಳಾಗಿವೆ. ಇದೇ ತಂಡವು ಈ ಉಪಪಂಗಡಕ್ಕೆ ಸೇರಿದ ಇನ್ನೆರಡು ಜೇಡ ಪ್ರಬೇಧಗಳನ್ನು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪತ್ತೆ ಮಾಡಿತ್ತು.

ಭಾರತದಲ್ಲಿ ಅಸಂಖ್ಯ ಪ್ರಬೇಧಗಳಿದ್ದು, ಈ ಪ್ರದೇಶದಲ್ಲಿ ಅಕಶೇರುಕಗಳ (ಬೆನ್ನೆಲುಬು ಇಲ್ಲದ) ಕೀಟಗಳ ತುಂಬಾ ಪಂಗಡಗಳ ಸಂಶೋಧನೆಯ ಕೊರತೆಯ ಹಿನ್ನೆಲೆಯಲ್ಲಿ ಸಾಕಷ್ಟು ಜೇಡಗಳ ಪತ್ತೆ ಅಥವ ಮರುಪತ್ತೆ ಆಗಬೇಕಾಗಿದೆ. ನಮ್ಮ ತಂಡವು ಒಂದೊಂದಾಗಿ ಪತ್ತೆ ಮಾಡುತ್ತಿದೆ ಎಂದು ಸಂಶೋಧನೆಯ ಮಹತ್ವದ ಬಗ್ಗೆ ಆಹ್ಮದ್ ಹೇಳುತ್ತಾರೆ.

ಈ ಜೇಡದ ಸಂಶೋಧನಾ ಕಾರ್ಯ 2017 ಫೆಬ್ರುವರಿ 8ರಂದು ಆರಂಭವಾಗಿ ಒಂದು ವರ್ಷದೊಳಗೆ ಮುಕ್ತಾಯ ಆಗಿದೆ. ಈ ಜೇಡ ಹುಳುವಿನ ವಿಶಿಷ್ಟ ಸ್ವರೂಪದಿಂದ ಗುರುತು ಮಾಡಲಾಗಿತ್ತು. ಇತರ ಪ್ರಕಟಿತ ವಿವರಣೆಗಳು ಮತ್ತು ನಿದರ್ಶನಗಳಿಗೆ ಹೋಲಿಸಿದರೆ ಈ ಸಣ್ಣ ಜೇಡಗಳು ಒಂದು ಚಪ್ಪಟೆ ಮತ್ತು ಅಸ್ಪಷ್ಟವಾದ ನೋಟ ಮತ್ತು ಕಾಲಿನ ಕೆಳಭಾಗದ ಮೇಲೆ ತೀವ್ರವಾದ ನರಗಳು ಕಾಣಿಸಿಕೊಳ್ಳುತ್ತವೆ. ಗಂಡು ಜೇಡ ಕಂದು ಬಣ್ಣ, ಕಪ್ಪು ಬಣ್ಣದಿಂದ ಕೂಡಿದ್ದು, ಸಣ್ಣ ಹಳದಿ ಬಣ್ಣದ ಗುರುತು ಬೆನ್ನಿನ ಭಾಗದಲ್ಲಿ ಹೊಂದಿದೆ. ಹೆಣ್ಣು ಜೇಡಗಳು ಮಸುಕಾದ ಕಂದುಬಣ್ಣವನ್ನು ಹೊಂದಿವೆ. ಪ್ರತಿ ಇಪ್ಪತ್ತು ಹೆಣ್ಣುಗಳ ನಡುವೆ ಕೇವಲ ಒಂದು ಗಂಡು ಜೇಡ ವಿರುವುದು ಪತ್ತೆಯಾಗಿದೆ.

ವಯಸ್ಕ ನೊಬೆರೆಟಸ್ ಜೇಡಕ್ಕೆ ಸಣ್ಣ ಜಾತಿಯ ಕೀಟಗಳೇ ಆಹಾರ. ಗಿಡಗಳ ರಸಹೀರಲು ಬರುವ ನುಸಿ, ಚಿಕ್ಕ ಕೀಟಗಳನ್ನು ಇವು ಕಬಳಿಸುತ್ತವೆ. ಈ ಜೇಡಗಳು ಬಹುಶಃ ಚಳಿಗಾಲದ ಕೊನೆಯ ಸಮಯದಲ್ಲಿ ಮೇ ತಿಂಗಳಿನ ತನಕ ಸಂತಾನೋತ್ಪತ್ತಿ ಮಾಡುವುದು, ಮುಂಗಾರು ಋತುವಿನ ಆರಂಭದ ಮೊದಲೇ ಪ್ರತಿ ಹೆಣ್ಣು 12-17 ಮೊಟ್ಟೆಗಳನ್ನು ಎಲೆಯ ಮೇಲೆ ತೆಳುವಾದ ರೇಷ್ಮೆ ತೆರನಾದ ಪದರದ ಮೇಲೆ ಇರಿಸುತ್ತದೆ.


Spread the love

Exit mobile version