ಅತ್ತಾವರದ ಶ್ರೀಮತಿ ಶೆಟ್ಟಿ ಕೊಂದು 29 ತುಂಡು ಮಾಡಿ ಎಸೆದಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು : ಕರಾವಳಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
2019ರ ಮೇ 11ರಂದು ಮಂಗಳೂರು ನಗರದ ವೆಲೆನ್ಸಿಯಾದ ಸೂಟರ್ ಪೇಟೆಯಲ್ಲಿ ಶ್ರೀಮತಿ ಶೆಟ್ಟಿ ಕೊಲೆ ನಡೆದಿತ್ತು. ಮನೆಗೆ ಬಂದು ಚಿಟ್ ಫಂಡ್ ಹಣ ಕೇಳಿದ್ದ ಮಹಿಳೆಯನ್ನು ಜೋನ್ ಸ್ಯಾಮ್ಸನ್ ದೊಣ್ಣೆಯಿಂದ ಹೊಡೆದು ಕೊಂದಿದ್ದ. ಬಳಿಕ ಶ್ರೀಮತಿ ಶೆಟ್ಟಿ ಅವರನ್ನು 29 ತುಂಡುಗಳಾಗಿ ಕತ್ತರಿಸಿ ನಗರದ ವಿವಿದೆಡೆ ಎಸೆಯಲಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜೋನಸ್ ಸ್ಯಾಮ್ಸನ್ ಮತ್ತು ಪತ್ನಿ ವಿಕ್ಟೀರಿಯಾ ಅವರ ಆರೋಪ ಸಾಬೀತಾಗಿತ್ತು. ಇದೀಗ ಆರೋಪಿ ದಂಪತಿಗೆ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ಮೂರನೇ ಆರೋಪಿ ರಾಜುಗೆ ಆರುವರೆ ತಿಂಗಳು ಸಾದಾ ಸಜೆ ಮತ್ತು 5000 ರು. ದಂಡ ವಿಧಿಸಲಾಗಿದೆ. ಈಗಾಗಲೇ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ರಾಜು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಸಂತ್ರಸ್ತರ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ವಾದ ಮಂಡಿಸಿದ್ದರು.