ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ರೂ 10.32 ಲಕ್ಷ ದಾನ ವಿತರಣೆ
ಕಾರ್ಕಳ: ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ದಾನ ಕಾರ್ಯಕ್ರಮ ಶುಕ್ರವಾರ ಸಂತ ಲಾರೇನ್ಸ್ ಬಾಸಿಲಿಕಾದಲ್ಲಿ ನಡೆಯಿತು.
ಜಾತ್ರೆಯ ಸಂದರ್ಭ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಭಿಕ್ಷುಕರಿಗೆ ದಾನ ನೀಡುವ ಭಕ್ತಾದಿಗಳೀಗೆ ಪ್ರತ್ಯೆಕ ಹುಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅದರಲ್ಲಿ ಸಂಗ್ರಹವಾದ ರೂ 10.32 ಲಕ್ಷ ಮೊತ್ತವನ್ನು ಶುಕ್ರವಾರ ಭಿಕ್ಷುಕರ ಅರ್ಹತೆಗೆ ಅನುಗುಣವಾಗಿ ಹಂಚಲಾಯಿತು.
ಮಕ್ಕಳು ಮತ್ತು ಕೆಲಸ ಮಾಡಲು ಶಕ್ತರಾಗಿರುವ ಯುವಕರಿಗೆ ಹಣ ನೀಡದೆ ಕೇವಲ ಊಟವನ್ನು ಮಾತ್ರ ನೀಡಲಾಯಿತು. ಬೆಳಿಗ್ಗಿನಿಂದಲೇ ತಂಡೋಪ ತಂಡವಾಗಿ ಅಸಂಖ್ಯಾತ ಭಿಕ್ಷುಕರು ಪುಣ್ಯಕ್ಷೇತ್ರದತ್ತ ಬಂದಿದ್ದು ಇಡೀ ಚರ್ಚಿನ ವಠಾ ಭಿಕ್ಷುಕರಿಂದ ತುಂಬಿ ಹೋಗಿತ್ತು. ವಿಕಲಚೇತನರು, ವೃದ್ಧರು, ಸಾಧು ಸಂತರು, ನಿಶಕ್ತರು, ಮಹಿಳೆಯರು, ಪುರುಷರು, ವೃದ್ಧರು, ವೃದ್ಧೆಯರು ಮತ್ತು ಕೆಲವು ಮಕ್ಕಳು ಕೂಡ ಈ ತಂಡದಲ್ಲಿದ್ದರು. ಮಧ್ಯಾಹ್ನ 12 ಗಂಟೆಗೆ ಎಲ್ಲರಿಗೂ ಗರೀಷ್ಟ 2000 ಹಾಗೂ ಕನಿಷ್ಟ ರೂ 300 ಮೊತ್ತ ಅವರವರ ದೈಹಿಕ ಅಸಮರ್ಥತೆಯನ್ನು ನೋಡಿ ಹಂಚುವುದರೊಂದಿಗೆ ಊಟವನ್ನು ಸಹ ನೀಡಲಾಯಿತು.
ಈ ವೇಳೆ ಮಾತನಾಡಿದ ಬೆಸಿಲಿಕಾದ ಚುನಾಯಿತ ಉಪಾಧ್ಯಕ್ಷರಾದ ಜಾನ್ ಡಿಸಿಲ್ವಾ ಅವರು ಐದು ದಿನಗಳ ಉತ್ಸವಕ್ಕೆ ಗುರುವಾರ ತೆರೆ ಬಿದ್ದಿದ್ದು ನಿರೀಕ್ಷೆಗೂ ಮೀರಿ ಲಕ್ಷಾಂತರ ಮಂದಿ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸಂತ ಲಾರೆನ್ಸರಿಗೆ ಬಡವರ ಮತ್ತು ಭಿಕ್ಷುಕರ ಮೇಲೆ ಅತೀವ ಪ್ರೀತಿ ಅದಕ್ಕಾಗಿ ಪ್ರತಿವರ್ಷ ಭಿಕ್ಷುಕರಿಗಾಗಿ ದಾನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಮೊದಲು ಭಿಕ್ಷುಕರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಮನವಿಯ ಮೇರೆಗೆ ಜಾತ್ರೆಯ ಸಂದರ್ಭದಲ್ಲಿ ಅದನ್ನು ಸಂಪೂರ್ಣ ನಿಷೇಧಿಸಿ ಭಿಕ್ಷುಕರಿಗಾಗಿ ಚರ್ಚಿನ ವಠಾರದಲ್ಲಿ ಮೂರು ಡಬ್ಬಿಗಳನ್ನು ಇಡಲಾಗಿತ್ತು ಅದರಲಿ ಸಂಗ್ರಹವಾದ ಹಣವನ್ನು ಜಾತ್ರೆ ಮುಗಿದ ಬಳಿಕ ಶುಕ್ರವಾರ ಅಂದರೆ ಇಂದು ಅವರವರ ಅರ್ಹತೆಗೆ ಅನುಗುಣವಾಗಿ ಹಂಚಲಾಗುತ್ತದೆ. ಹಣದ ಜೊತೆಗೆ ಅವರಿಗೆ ಮಧ್ಯಾಹ್ನದ ಊಟವನ್ನುಕೂಡ ನೀಡಲಾಗತ್ತದೆ ಎಂದರು.
ಈ ವೇಳೆ ಚರ್ಚಿನ ಸಹಾಯಕ ಧರ್ಮಗುರು ವಂ ವಿಜಯ್ ಡಿಸೋಜಾ, ಉಪಾಧ್ಯಕ್ಷ ರಿಚ್ಚಾರ್ಡ್ ಪಿಂಟೊ, ವಲೇರಿಯನ್ ಪಾಯಸ್, ಸಂತೋಶ್ ಡಿಸಿಲ್ವಾ, ಲಿಯೊ ಸಿಕ್ವೇರಾ ಹಾಗೂ ಇತರರು ಉಪಸ್ಥಿತರಿದ್ದರು.