ಅತ್ತೂರು ಬಸಿಲಿಕಾ ಮಹೋತ್ಸವ : ಸಜ್ಜನರಾಗಿ ಜೀವಿಸಲು ನಿರ್ಧರಿಸೋಣ- ಬಿಷಪ್ ರೋಬರ್ಟ್ ಮಿರಾಂದಾ
ಕಾರ್ಕಳ: ಐದು ದಿನಗಳ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಎರಡನೆಯ ದಿನ ಸೋಮವಾರ ರೋಗಿಗಳಿಗಾಗಿ ಹಾಗೂ ವಿವಿಧ ರೀತಿಯ ಕಷ್ಟಗಳಿಗೆ ಒಳಗಾದವರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ಬೆಳಗ್ಗಿನ ಪೂಜೆಗಳನ್ನು ವಂದನೀಯ ಹೆನ್ರಿ ಮಸ್ಕರೇನಸ್ ಮತ್ತು ವಂದನೀಯ ಅಲೆಕ್ಸಾಂಡರ್ ಲುವಿಸ್ರವರು ನೆರವೇರಿಸಿದರು. ಮುಲ್ಕಿ ಡಿವೈನ್ ಸೆಂಟರ್ನ ವಂದನೀಯ ಅಬ್ರಹಾಮ್ ಡಿಸೋಜಾರವರು ರೋಗಿಷ್ಠರಿಗಾಗಿ ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಪ್ರಾರ್ಥಿಸಿದರು. ವಿವಿಧ ಮೂಲೆಗಳಿಂದ ಅಸ್ವಸ್ಥರನ್ನು ಹಾಗೂ ರೋಗಿಗಳನ್ನು ಕರೆತಂದ ವಾಹನಗಳು ಹಾಗೂ ಅಂಬ್ಯುಲೆನ್ಸ್ಗಳಿಂದ ಬಸಿಲಿಕಾ ವಠಾರ ತುಂಬಿತ್ತು. ಧರ್ಮಗುರುಗಳು ರೋಗಿಗಳನ್ನು ಮುಟ್ಟಿ ಆಶೀರ್ವದಿಸಿ ಅವರ ಸ್ವಸ್ಥತೆಗಾಗಿ ಪ್ರಾರ್ಥಿಸಿದರು. ಹಲವಾರು ರೋಗಿಗಳು ವಾಹನಗಳಿಂದ ಇಳಿಯಲು ಸಾಧ್ಯವಾಗದಿದ್ದಾಗ, ಗುರುಗಳ ಅವರ ಬಳಿಗೆ ಹೋಗಿ ಪ್ರಾರ್ಥಿಸಿದರು.
ಭಾನುವಾರ ಬೆಳಗ್ಗಿನಿಂದಲೂ, ಬಸಿಲಿಕಾದಲ್ಲಿ ತಂಗಿರುವ ಉಡುಪಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರು ಸ್ವತಃ ಮುಂದೆ ನಿಂತು ಮಹೋತ್ಸವದ ವಿವಿಧ ಕಾರ್ಯಗಳಲ್ಲಿ ಸಹಕರಿಸಿದ್ದು ವಿಶೇಷವಾಗಿತ್ತು.
ರೋಗಿಗಳಿಗಾಗಿ ಅಪರಾಹ್ನದ ಪೂಜೆಯನ್ನು ನೆರವೇರಿಸಿದ ಗುಲ್ಬರ್ಗದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ರಾಬರ್ಟ್ ಮಿರಾಂದರವರು ತಮ್ಮ ಪ್ರವಚನದಲ್ಲಿ, ದೇವರ ರೋಗ ಗುಣಪಡಿಸುವ ಶಕ್ತಿ ಸಂತ ಲಾರೆನ್ಸರ ಮಧ್ಯಸ್ಥಿಕೆಯ ಮೂಲಕ ಅತ್ತೂರು ಪುಣ್ಯಕ್ಷೇತ್ರದಲ್ಲಿ ವಿಶೇಷವಾಗಿ ಭಕ್ತಾದಿಗಳನ್ನು ಗುಣಪಡಿಸುತ್ತದೆ. ಶ್ರೀಕ್ಷೇತ್ರಕ್ಕೆ ಬಂದು, ಮನಪರಿವರ್ತನೆಗೊಂಡು ಸಜ್ಜನರಾಗಿ ಜೀವಿಸಲು ನಿರ್ಧರಿಸಿ ಭಗವಂತನಲ್ಲಿ ಪ್ರಾರ್ಥಿಸುವುದು ಸೂಕ್ತವಾಗಿದೆ ಎಂದರು. ಪೂಜಾಂತ್ಯದಲ್ಲಿ ಅವರು ದೊಡ್ಡ ಸಂಖ್ಯೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ರೋಗಿಷ್ಠರು ಹಾಗೂ ಭಕ್ತಾದಿಗಳನ್ನು ಆಶೀರ್ವದಿಸಿದರು.
ನಾನು ಪವಿತ್ರನಾಗಿರುವಂತೆ ನೀವೂ ಪವಿತ್ರರಾಗಿರಿ ಎಂಬ ಮಹೋತ್ಸವದ ಧ್ಯೇಯವಾಕ್ಯದ ಮೇಲೆ ಕೇಂದ್ರಿಕೃತಗೊಂಡು ಇಡೀ ದಿನದ ಬಲಿಪೂಜೆಗಳು ಹಾಗೂ ಕಾರ್ಯಕ್ರಮಗಳು ನೆರವೇರಿದವು. ಸೋಮವಾರದ ಏಕೈಕ ಕನ್ನಡ ಭಾಷೆಯ ಬಲಿಪೂಜೆಯನ್ನು ಶಿವಮೊಗ್ಗದ ವಂದನೀಯ ವೀನಸ್ ಪ್ರವೀಣ್ರವರು ನೆರವೇರಿಸಿದರು. ಬಲಿಪೂಜೆಗಳು ತಡರಾತ್ರಿ ಹತ್ತೂವರೆ ಗಂಟೆಯವರೆಗೆ ನಡೆದವು. ಹಗಲಿನ ವೇಳೆಯಲ್ಲಿ ಭಕ್ತಾದಿಗಳ ಸಂಖ್ಯೆ ಅಷ್ಟಿರಲಿಲ್ಲವಾದರೂ ಸಂಜೆಯಾದಂತೆ ಜನಸಂದಣಿ ಹೆಚ್ಚಾಗಿದ್ದು ಕಂಡುಬಂತು.
ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಹಲವು ಬಲಿಪೂಜೆಗಳು ಬೆಳಿಗ್ಗೆ 7.30, 9.00, 12.00, 3.00, 4.30, 8.00 ಹಾಗೂ 11.00 ಗಂಟೆಗೆ ಕೊಂಕಣಿ ಭಾಷೆಯಲ್ಲೂ, 10.30, 1.30 ಹಾಗೂ ರಾತ್ರಿ 9.30 ರ ಬಲಿಪೂಜೆಗಳು ಕನ್ನಡ ಭಾಷೆಯಲ್ಲೂ ನೆರವೇರಲಿವೆ. ಬೆಳಿಗ್ಗೆ 10.30 ಯ ಕನ್ನಡ ಬಲಿಪೂಜೆಯನ್ನು ಬೆಂಗಳೂರಿನ ಕ್ರಾಸ್ ಸಂಸ್ಥೆಯ ವಂದನೀಯ ಫಾವುಸ್ಟಿನ್ ಲೋಬೊರವರು ಹಾಗು ಸಂಜೆ 6.00 ಗಂಟೆಯ ಬಲಿಪೂಜೆಯನ್ನು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಪೀಟರ್ ಮಚಾಡೊರವರು ನೆರವೇರಿಸಲಿದ್ದಾರೆ.
ಪರರ ಸೇವೆಯೇ ಪರಮಾತ್ಮನ ಸೇವೆ ಅತ್ತೂರಿನಲ್ಲಿ ನಿವೃತ್ತ ಬಿಷಪ್ ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ
ಸಂತ ಲಾರೆನ್ಸರು ಅಂಗವಿಕಲರು, ಅಶಕ್ತರು, ಬಡವರಿಗೆ ಆಸ್ತಿಯನ್ನು ದಾನ ನೀಡಿ, ಪ್ರೀತಿ ಹಂಚಿದ್ದರು. ಏಸು ಸ್ವಾಮಿಯವರು ಲೋಕದ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿ, ತನಗೆ ಜನತೆ ಮೇಲಿರುವ ಮಮತೆಯನ್ನು ಸಾದರಪಡಿಸಿದರು. ಹೀಗೆಯೇ ನಾವೆಲ್ಲರೂ ಪರರ ಒಳಿತನ್ನು ಬಯಸಬೇಕೆಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಬಿಷಪ್ ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.
ಅವರು ರವಿವಾರ ಸಂಜೆ ಅತ್ತೂರು ಚರ್ಚ್‌ನಲ್ಲಿ ಮಕ್ಕಳಿಗಾಗಿ ನಡೆದ ಬಲಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪರರ ಸೇವೆಯೇ ಪರಮಾತ್ಮನ ಸೇವೆ. ನಮ್ಮ ಸುತ್ತಮುತ್ತಲಿರುವ ಜನರ ಏಳಿಗೆಗಾಗಿ ಯಾವುದೇ ರೀತಿಯ ತ್ಯಾಗ-ಸೇವೆ ನೀಡಲು ಹಿಂಜರಿಯಬಾರದು ಎಂದು ಹೇಳಿದರು.
ಶಿರ್ವ ಆರೋಗ್ಯ ಮಾತಾ ಚರ್ಚ್ ಹಾಗೂ ಶಿರ್ವ ವಲಯ ಪ್ರಧಾನ ಧರ್ಮಗುರು ಫಾ| ಡೇನಿಸ್ ಡೇಸಾ, ಉಡುಪಿ ಧರ್ಮಪ್ರಾಂತ ದಿವ್ಯಜ್ಯೋತಿ ಕೇಂದ್ರದ ನಿರ್ದೇಶಕ ಫಾ| ಸ್ಟೀವನ್ ಡಿ’ಸೋಜಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ಫಾ| ಜೊಸ್ವಿ ಫೆರ್ನಾಂಡಿಸ್ ಸಹಿತ 20 ಧರ್ಮಗುರುಗಳು ಉಪಸ್ಥಿತರಿದ್ದರು.
ಜಾತ್ರೆಯ ಪ್ರಥಮ ದಿನದಂದೇ ಆಡಳಿತ ಸಮಿತಿಯವರ ನಿರೀಕ್ಷೆಗಿಂತ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಕರಾವಳಿ ಜಿಲ್ಲೆ ಮಾತ್ರವಲ್ಲದೆ ವಿವಿಧೆಡೆಗಳಿಂದ ಭೇಟಿ ನೀಡಿದ್ದರು. ದೂಪದ ಕಟ್ಟೆ, ಶಿಲುಬೆಗುಡ್ಡೆ, ಸಂತ ಲಾರೆನ್ಸ್‌ನ ಒಟ್ಟು 12 ಕಡೆ ಪಾರ್ಕಿಂಗ್‌ಗೆಅಣಿಗೊಳಿಸಿದ ಮೈದಾನಗಳಲ್ಲಿ ವಾಹನ ದಟ್ಟಣೆಯಿತ್ತು.