ಅತ್ತೂರು ಮಹೋತ್ಸವಕ್ಕೆ ಚಾಲನೆ ; ‘ಬಡವರಿಗೆ ನೀಡುವವನು ಭಗವಂತನಿಗೇ ಎರವಲು ನೀಡುತ್ತಾನೆ’: ಬಿಷಪ್ ಫ್ರಾನ್ಸಿಸ್ ಸೆರಾವೊ
ಕಾರ್ಕಳ: ‘ಬಡಬಗ್ಗರು ನಮ್ಮ ಸಹೋದರ ಸಹೋದರಿಯರು. ಅವರನ್ನು ಆಧರಿಸುವವನು ದೇವರಿಗೆ ಎರವಲು ನೀಡುತ್ತಾನೆ. ಆತನ ಸಹಾಯ ಎಂದಿಗೂ ವ್ಯರ್ಥವಾಗಿ ಹೋಗದು. ಬಡವರು ಹಾಗೂ ನಿರಾಶ್ರಿತರಿಗೆ ಸಹಾಯ ಮಾಡುವುದು ಐಚ್ಛಿಕ ವಿಚಾರವಲ್ಲ, ಬದಲಾಗಿ ನಮ್ಮ ಜವಾಬ್ದಾರಿ’ ಎಂದರು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊರವರು. ಅತ್ತೂರು- ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವದ ಮೊದಲನೇ ದಿನದ ಪ್ರಮುಖ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಅವರು ಮಾತನಾಡುತ್ತಿದ್ದರು.
ಅತ್ತೂರು- ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ಐದು ದಿನಗಳ ವಾರ್ಷಿಕ ಮಹೋತ್ಸವವು 21 ರಂದು ಭಾನುವಾರ ವಿಜೃಂಭಣೆ ಹಾಗೂ ಭಕ್ತಿಯಿಂದ ಪ್ರಾರಂಭವಾಯಿತು. ಮುಂಜಾನೆ ನಡೆದ ‘ಸಹೋದರತ್ವದ ಭಾನುವಾರ’ ದ ಸಂಭ್ರಮದ ಬಲಿಪೂಜೆಯನ್ನು ಶಿವಮೊಗ್ಗದ ವಂದನೀಯ ವೀರೇಶ್ ಮೊರಾಸ್‍ರವರು ಅರ್ಪಿಸಿ, ಆನಂತರ ನಡೆದ ದಿವ್ಯ ಪರಮಪ್ರಸಾದದ ಮೆರವಣಿಗೆಯ ಮುಂದಾಳತ್ವವನ್ನು ವಹಿಸಿದರು.
ಹಬ್ಬದ ಮೊದಲನೇ ದಿನವನ್ನು ‘ಪುಟಾಣಿ ಮಕ್ಕಳಿಗಾಗಿ’ ಸಮರ್ಪಿಸುವ ವಾಡಿಕೆಯಂತೆ ದಿನದ ಎರಡು ಬಲಿಪೂಜೆಗಳನ್ನು ಮಕ್ಕಳಿಗಾಗಿ ಅರ್ಪಿಸಲಾಯಿತು. ತಮ್ಮ ಮಾತೆಯಂದಿರೊಂದಿಗೆ ಆಗಮಿಸಿದ ನೂರಾರು ಪುಟಾಣಿಗಳು ಹಬ್ಬದ ಸಂಬ್ರಮವನ್ನು ಇಮ್ಮಡಿಗೊಳಿಸಿದರು. ಕಪುಚಿನ್ ಗುರು ವಂದನೀಯ ಜೇಸನ್ ಪಾಯ್ಸ್‍ರವರು ಹಾಗೂ ಶಿವಮೊಗ್ಗದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ ರವರು ಮಕ್ಕಳಿಗಾಗಿ ಬಲಿಪೂಜೆ ಅರ್ಪಿಸಿ, ಕೊನೆಯಲ್ಲಿ ಮಕ್ಕಳಿಗೆ ವಿಶೇಷ ಆಶೀರ್ವಾದಗಳನ್ನು ನೀಡಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‍ರವರು ತಮ್ಮ ಧರ್ಮಪತ್ನಿಯೊಡಗೂಡಿ ಬೆಳಗ್ಗಿನ ವಿಶೇಷ ಪೂಜೆಗೆ ಹಾಜರಿದ್ದರು. ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತ ಗಣ್ಯರಲ್ಲಿ ಉಡುಪಿಯ ಎಸ್‍ಪಿ ಶ್ರಿ ಲಕ್ಷಣ್ ನಿಂಬರ್ಗಿ, ಅಡಿಶನಲ್ ಎಸ್‍ಪಿ ಕುಮಾರ್ ಚಂದ್ರ ಹಾಗೂ ಎಎಸ್‍ಪಿ ರಿಶಿಕೇಶ್ ಸೋನಾವನಿ ಸೇರಿದ್ದರು. ಭಾನುವಾರ ರಜಾ ದಿನವಾದ್ದರಿಂದ ಪುಣ್ಯಕ್ಷೇತ್ರವು ಭಕ್ತಾದಿಗಳಿಂದ ಗಿಜಿಗುಡುತ್ತಿತ್ತು.
ಐದು ದಿನಗಳ ಮಹೋತ್ಸವಕ್ಕಾಗಿ ಎಲ್ಲಾ ಸಿದ್ಧತೆಗಳು ಅಚ್ಚುಕಟ್ಟಾಗಿದ್ದವು. ಸುಮಾರು 500 ರಷ್ಟು ಸ್ವಯಂಸೇವಕರು ಕಾರ್ಯನಿರತರಾಗಿ ಭಕ್ತಾದಿಗಳಿಗೆ ಸಹಾಯಹಸ್ತವನ್ನು ನೀಡುತ್ತಿದ್ದರು. ಕರ್ನಾಟಕದಾದ್ಯಂತದಿಂದ ಆಗಮಿಸಿದ ಧರ್ಮಗುರುಗಳು ಕ್ರೈಸ್ತ ಭಕ್ತಾದಿಗಳಿಗೆ ಪಾಪ ನಿವೇದನೆಯ ಸಂಸ್ಕಾರವನ್ನು ನೀಡುವುದರಲ್ಲು, ಆಪ್ತ ಸಮಾಲೋಚನೆಯಲ್ಲೂ ತೊಡಗಿದ್ದರು. ಉಡುಪಿಯ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಲೋಬೋರವರು ಬೆಳಗ್ಗಿನಿಂದಲೇ ಪುಣ್ಯಕ್ಷೇತ್ರದಲ್ಲಿದ್ದು ಮುಂದಿನ ಐದು ದಿನಗಳ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ನಡೆಸುವರು.
ಮಹೋತ್ಸವದ ಎರಡನೇ ದಿನವಾದ 22 ರಂದು ಒಟ್ಟು 7 ಬಲಿಪೂಜೆಗಳು (ಮುಂಜಾನೆ 8, 10, 12 ಹಾಗೂ ಅಪರಾಹ್ನ 3.30, 6, 7.30, 9 ಗಂಟೆಗೆ) ನಡೆಯಲಿದ್ದು, ದಿನದ ಪ್ರಮುಖ ಬಲಿಪೂಜೆಯು ಸಂಜೆ 6 ಗಂಟೆಗೆ ಬೆಳ್ತಂಗಡಿಯ ಧರ್ಮಾಧ್ಯಕ್ಷರಾದ ಡಾ. ಲಾರೆನ್ಸ್ ಮುಕ್ಕುಝಿ ರವರು ನಡೆಸಲಿದ್ದಾರೆ. ರೋಗಿಗಳಿಗಾಗಿ ವಿಶೇಷವಾಗಿ ಅರ್ಪಿಸುವ ಬಲಿಪೂಜೆಗಳು ಬೆಳಗ್ಗೆ 10 ಮತ್ತು ಮದ್ಯಾಹ್ನ 3.30 ಕ್ಕೆ ನೆರವೇರಲಿರುವುವು.
ಸಂಪೂರ್ಣ ವಿದ್ಯುದಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುವ ಸಂತ ಲಾರೆಸ್ ಬಸಿಲಿಕ ಹಾಗೂ ವಠಾರವು ಭಕ್ತಿಸುಧೆಯಿಂದ ತುಂಬಿ ತುಳುಕುತ್ತಿದೆ ಎನ್ನುವುದು ಸತ್ಯ.
ಗಮನ ಸೆಳೆದ ರಾಯಚೂರಿನ ಕಪುಚಿನ್ ಗುರು ಅಭ್ಯರ್ಥಿಗಳು
ಪುಣ್ಯಕ್ಷೇತ್ರದಲ್ಲಿ ಸೇವಾ ಕಾರ್ಯವನ್ನು ನೆರವೇರಿಸಲು ದೂರದ ರಾಯಚೂರಿನ ಪೋತ್ನಾಳದಿಂದ ಬಂದ ಕಪುಚಿನ್ ಸಭೆಯ ಗುರು ಅಭ್ಯರ್ಥಿಗಳು ತಮ್ಮ ಕಂದು ಬಣ್ಣದ ನಿಲುವಂಗಿಗಳನ್ನು ಧರಿಸಿ ಪುಣ್ಯಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಹೂ-ತೀರ್ಥ ಪ್ರಸಾದವನ್ನು ಭಕ್ತಾದಿಗಳಿಗೆ ಲಗುಬಗೆಯಿಂದ ವಿತರಿಸಿ ಎಲ್ಲರ ಗಮನವನ್ನು ಸೆಳೆದರು. ಫ್ರಾನ್ಸಿಸ್ಕನ್ ಕಪುಚಿನ್ ಸಭೆಯ ಇವರನ್ನು ಭಕ್ತಾದಿಗಳು ಅಕ್ಕರೆಯಿಂದ ‘ಬ್ರದರ್’ ಎಂದು ಕರೆದು ಅವರ ಸೇವೆಯನ್ನು ಶ್ಲಾಘಿಸಿದರು.