ಅತ್ತೂರು ಮಹೋತ್ಸವ: ‘ರೋಗಿಗಳಿಗೆ ನೀಡಿದ ಸಾಂತ್ವನ ಭಗವಂತನಿಗೆ ಸಲ್ಲಿಸಿದ ಸೇವೆ’: ವಂ. ಅಲ್ಬನ್ ಡಿ’ಸೋಜಾ
ಕಾರ್ಕಳ: ‘ರೋಗ ರುಜಿನಗಳಿಂದ ಕಷ್ಟಪಡುವವರಲ್ಲಿ ದೇವರನ್ನು ಕಂಡು ಅವರಿಗೆ ಸಲ್ಲಿಸಿದ ಸೇವೆಯು ಭಗವಂತನಿಗೆ ಸಲ್ಲುತ್ತದೆ. ದೈಹಿಕ ಹಾಗೂ ಮಾನಸಿಕ ರೋಗಗಳಿಂದ ಬವಣೆಪಡುತ್ತಿರುವ ಸಹೋದರ ಸಹೋದರಿಯರನ್ನು ಸಂತೈಸುವ ಸುಮನಸ್ಸು ನಮ್ಮಲ್ಲಿರಲಿ’ ಎಂಬ ಕಿವಿಮಾತನ್ನು ಹೇಳಿದವರು ಉಡುಪಿ ಕಲ್ಮಾಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂದನೀಯ ಅಲ್ಬನ್ ಡಿ’ಸೋಜಾರವರು. ಸೋಮವಾರದಂದು ಅತ್ತೂರು-ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವದ ಎರಡನೇ ದಿನದ ವಿಶೇಷವಾದ ‘ರೋಗಿಗಳಿಗಾಗಿ ಅರ್ಪಿಸಿದ ದಿವ್ಯಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಹಬ್ಬದ ಎರಡನೇ ದಿನ ಸೋಮವಾರ ನೂರಾರು ಮಂದಿ ರೋಗಿಗಳು, ದಿವ್ಯಚೇತನರು ಹಾಗೂ ವಯೋವೃದ್ಧರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಪುಣ್ಯಕ್ಷೇತ್ರಕ್ಕೆ ಬಂದು ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ 10 ಗಂಟೆಗೆ ಹಾಗೂ ಮಧ್ಯಾನ್ಹ 3 ಗಂಟೆಗೆ ಅರ್ಪಿಸಲಾದ ಬಲಿಪೂಜೆಗಳಲ್ಲಿ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಿ ಅವರ ಶಿರಗಳ ಮೇಲೆ ಹಸ್ತನಿಕ್ಷೇಪ ಮಾಡಿ ಆಶೀರ್ವದಿಸಲಾಯಿತು. ಹಲವಾರು ರೋಗಿಗಳು ತಮ್ಮ ವಾಹನಗಳಿಂದ ಕೆಳಕ್ಕಿಳಿಯಲು ಅಶಕ್ತರಾಗಿದ್ದರಿಂದ ಧರ್ಮಗುರುಗಳು ಅವರ ಬಳಿಗೆ ಹೋಗಿ ಅವರನ್ನು ಮುಟ್ಟಿ ಆಶೀರ್ವದಿಸಿದರು. ವಂದನೀಯ ರೆಜಿನಾಲ್ಡ್ ಪಿಂಟೊ ಹಾಗೂ ವಂದನೀಯ ಅಲ್ಬನ್ ಡಿ’ಸೋಜಾರವರು ಈ ಬಲಿಪೂಜೆಗಳನ್ನು ನೆರವೇರಿಸಿದರು.
ದಿನದ ಪ್ರಧಾನ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಸದಸ್ಯರಾದ ಪರಮಪೂಜ್ಯ ಡಾ. ಲಾರೆನ್ಸ್ ಮುಕ್ಕುಝಿಯವರು ನೆರವೇರಿಸಿ ಭಕ್ತರಿಗಾಗಿ ಪ್ರಾರ್ಥಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಮಾಜಿ ವಿಧಾನ ಸಭಾ ಸದಸ್ಯ ಗೋಪಾಲ ಭಂಡಾರಿಯವರು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತರು. ವಿಧಾನ ಪರಿಷತ್ತಿನ ಸಚೇತಕ ಐವನ್ ಡಿ’ಸೋಜಾರವರು ಪತ್ನಿ ಸಮೇತ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದರು. ಉಡುಪಿಯ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಲೋಬೋರವರು ಗಣ್ಯರನ್ನು ಆದರದಿಂದ ಬರಮಾಡಿಕೊಂಡರು.
ರಜಾ ದಿನವಲ್ಲವಾದರೂ ಸೋಮವಾರದ ಮಧ್ಯಾಹ್ನ ನಂತರ ಬಸಿಲಿಕದೊಳಗಿನ ಬಲಿಪೂಜೆಗಳಲ್ಲಿ, ಸಂತ ಲಾರೆನ್ಸರ ಪವಾಡಮೂರ್ತಿಯ ಮುಂದೆ ಹಾಗೂ ಪುಶ್ಕರಿಣಿಯ ಬಳಿ ಭಕ್ತಾದಿಗಳ ಉದ್ದವಾದ ಸಾಲುಗಳು ಕಂಡು ಬಂದವು. ಸಂಜೆಯ ಸಮಯದಲ್ಲಿ ಬಸಿಲಿಕದ ಹೊರ ಆವರಣದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಜನಸಂದಣಿ ಬಹಳವಾಗಿ ಕಂಡು ಬಂದಿತು. ಸಾಂಪ್ರದಾಯಿಕವಾಗಿ ಹಬ್ಬವು ಆರಂಭವಾಗುವ ಮಂಗಳವಾರದಂದು, ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವ ನಿರೀಕ್ಷೆಯಿದೆ.
ಮಹೋತ್ಸವದ ಮೂರನೇ ದಿನವಾದ 23 ರಂದು ಒಟ್ಟು 11 ಬಲಿಪೂಜೆಗಳು (ಮುಂಜಾನೆ 7.30, 9 10.30, 12 ಹಾಗೂ ಅಪರಾಹ್ನ 1.30, 3, 4.30, 6, 8, 9.30, 11 ಗಂಟೆಗೆ) ನಡೆಯಲಿದ್ದು, ದಿನದ ಪ್ರಮುಖ ಬಲಿಪೂಜೆಯು ಸಂಜೆ 6 ಗಂಟೆಗೆ ಕನ್ನಡ ಭಾಷೆಯಲ್ಲಿ ಮೈಸೂರಿನ ಧರ್ಮಾಧ್ಯಕ್ಷರಾದ ಡಾ. ಕೆ.ಎ. ವಿಲಿಯಂರವರು ನಡೆಸಲಿದ್ದಾರೆ. 10.30, 1.30, 6 ಮತ್ತು 9 ಗಂಟೆಯ ಬಲಿಪೂಜೆಗಳು ಕನ್ನಡ ಭಾಷೆಯಲ್ಲಿಯೂ ಇನ್ನಿತರ ಬಲಿಪೂಜೆಗಳು ಕೊಂಕಣಿ ಭಾಷೆಯಲ್ಲಿಯೂ ನೆರವೇರಲಿರುವುವು.
ಮಂಗಳವಾರ 6 ಗಂಟೆಯ ಬಲಿಪೂಜೆಯ ಬಳಿಕ ಪುಣ್ಯಕ್ಷೇತ್ರದ ಸೇವಾಕಾರ್ಯದಲ್ಲಿ ನೆರವು ನೀಡಿದ ಗಣ್ಯರಿಗೆ ಪುಟ್ಟ ಸಮಾರಂಭವೊಂದರಲ್ಲಿ ಧರ್ಮಾಧ್ಯಕ್ಷರು ಸನ್ಮಾನಿಸಿ ಆಶೀರ್ವದಿಸಲಿರುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಹಾಗೂ ಇತರ ಗಣ್ಯರು ಭಾಗವಹಿಸಲಿರುವರು.