ಅತ್ತೂರು ಮೈನರ್ ಬಸಿಲಿಕ’ ಉನ್ನತಿಗೇರಿಸುವ ಘೋಷಣೆ ಹಾಗೂ ಸಮರ್ಪಣೆಗೆ ಭರದ ಸಿದ್ದತೆ
ಉಡುಪಿ: ಅಗೋಸ್ತು 1 ರಂದು ಸಂತ ಲಾರೆನ್ಸ್ ಪವಿತ್ರಾಲಯವನ್ನು ‘ಕಿರಿಯ ಬಸಿಲಿಕ’ ಎಂಬ ಉನ್ನತಿಗೇರಿಸುವ ಘೋಷಣೆ ಹಾಗೂ ಸಮರ್ಪಣೆಯನ್ನು ಸಕಲ ಸಂಭ್ರಮಗಳೊಂದಿಗೆ ಆದ್ದೂರಿಯಾಗಿ ಆಚರಿಸುವುದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಧರ್ಮಾಧ್ಯಕ್ಷರ ನಿವಾಸದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. ಸಂಭ್ರಮವನ್ನು ಆಚರಿಸುವುದಕ್ಕೆ ಭಾರತ ದೇಶವನ್ನು ಪ್ರತಿನಿಧಿಸುವ ನಾಲ್ವರೂ ಕಾರ್ಡಿನಲ್‍ಗಳು ಹಲವಾರು ಮಹಾ ಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಯಾಜಕರು, ಮಂಗಳೂರು, ಉಡುಪಿ ಹಾಗೂ ನೆರೆಹೊರೆಯ ಧರ್ಮಪ್ರಾಂತಗಳ ಸಾವಿರಾರು ಭಕ್ತಾದಿಗಳು ಅತ್ತೂರಿನ ‘ಕಿರಿಯ ಬಸಿಲಿಕ’ದಲ್ಲಿ ಅಂದು ನೆರೆಯುವರು. ಅದು ಅತ್ತೂರಿನ ಮಾತ್ರವಲ್ಲ, ಇಡೀ ಕರ್ನಾಟಕದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಭ್ರಮ ಹಾಗೂ ಧನ್ಯತೆಯ ಕ್ಷಣ.
ಅಂದಿನ ಕಾರ್ಯಕ್ರಮವು ಬೆಳಗ್ಗೆ 10.00 ಗಂಟೆಗೆ ಬಲಿಪೂಜೆಯೊಂದಿಗೆ ಆರಂಭವಾಗಿ 11.45 ಕ್ಕೆ ಸಭಾ ಕಾರ್ಯಕ್ರಮದೊಂದಿಗೆ ಮುಂದುವರಿದು ಅಪರಾಹ್ನ 1.00 ಗಂಟೆಗೆ ಸಹಭೋಜನದೊಂದಿಗೆ ಕೊನೆಗೊಳ್ಳುವುದು. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಕ್ರೀಡೆ ಹಾಗೂ ಯುವಜನ ಸಬಲೀಕರಣ ಖಾತೆಯ ಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಮೋದ್ ಮಧ್ವರಾಜ್, ಅರಣ್ಯ ಹಾಗು ಪರಿಸರ ಖಾತೆಯ ಮಂತ್ರಿ ರಮಾನಾಥ ರೈ, ಕಾರ್ಕಳದ ಶಾಸಕ ಸುನಿಲ್ ಕುಮಾರ್, ಸಂಸದರಾದ ಕುಮಾರಿ ಶೋಭಾ ಕರಂದ್ಲಾಜೆ ಹಾಗೂ ಓಸ್ಕರ್ ಫೆರ್ನಾಂಡಿಸ್, ಶಾಸಕರಾದ ವಿನಯ್ ಕುಮಾರ್ ಸೊರಕೆ, ಜೆ. ಆರ್. ಲೋಬೊ, ಐವನ್ ಡಿ’ಸೋಜಾ ಹಾಗೂ ಕಾರ್ಕಳದ ಮಾಜಿ ಶಾಸಕರಾದ ಗೋಪಾಲ್ ಭಂಡಾರಿ ಪಾಲ್ಗೊಳ್ಳಲಿರುವರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ 10-12 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪ್ರಕೃತಿಯ ವರದಾನದಂತಿರುವ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರವಾದ ಅತ್ತೂರು ಸಂತ ಲಾರೆನ್ಸರ ಪವಿತ್ರಾಲಯಕ್ಕೆ ಇಂದೀಗ ಪರ್ವ ಸಮಯ. 1759ರಿಂದ ಈಚೆಗಿನ ಐತಿಹ್ಯವನ್ನು ಹೊಂದಿರುವ ಈ ಪವಿತ್ರಾಲಯವು ಹಲವು ಕಾರಣ ಹಾಗೂ ಪವಾಡಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು ಈಗ ಅದರ ವಿಖ್ಯಾತಿಯು ಕ್ರೈಸ್ತ ಧರ್ಮದ ಕೇಂದ್ರವಾದ ವ್ಯಾಟಿಕನ್‍ಗೂ ತಲುಪಿದೆ.
ತುಳುನಾಡಿನ ಸ್ಥಳೀಯ ಜನರು ‘ಕಾರ್ಲದ ದೇವೆರ್’ ಎಂದು ಅಕ್ಕರೆ ಹಾಗೂ ಭಕ್ತಿಯಿಂದ ಗುರುತಿಸಲ್ಪಡುವ ಪವಾಡ ಪುರುಷ ಎಂದೇ ಪ್ರಖ್ಯಾತಿ ಹೊಂದಿದ ಸಂತ ಲಾರೆನ್ಸರಿಗೆ ಸಮರ್ಪಿತ ಈ ದೇವಾಲಯವನ್ನು ಕ್ರೈಸ್ತರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸರು ‘ಮಹಾ ದೇವಾಲಯ’ (ಮೈನರ್ ಬಸಿಲಿಕ) ದ ಉನ್ನತಿಗೆ ಏರಿಸುವ ಘೋಷಣೆಯನ್ನು ಹೊರಡಿಸಿದ್ದಾರೆ. ಇದರೊಂದಿಗೆ ಸಂತ ಲಾರೆನ್ಸರ ದೇವಾಲಯವು ಕರಾವಳಿ ಕರ್ನಾಟಕದ ಏಕಮಾತ್ರ ಹಾಗೂ ಬೆಂಗಳೂರು ಶಿವಾಜಿನಗರದ ಸೈಂಟ್ ಮೇರಿ ಬಸಿಲಿಕದ ನಂತರ, ಕರ್ನಾಟಕದ ಎರಡನೇ ಬಸಿಲಿಕವಾಗಿ ಸ್ಥಾಪಿತಗೊಂಡು ಉಡುಪಿ ಜಿಲ್ಲೆಯ ಖ್ಯಾತಿಯನ್ನು ವಿಶ್ವದೆಲ್ಲೆಡೆ ಪ್ರಸರಿಸಲು ಕಾರಣವಾಗಿದೆ.
ಮಹಾ ದೇವಾಲಯ (ಬಸಿಲಿಕ) ಗಳಲ್ಲಿ ಎರಡು ವಿಧ: ಹಿರಿ ಮಹಾ ದೇವಾಲಯಗಳು ಹಾಗೂ ಕಿರು ಮಹಾ ದೇವಾಲಯಗಳು. ವಿಶ್ವದ ನಾಲ್ಕೂ ಹಿರಿ ಮಹಾ ದೇವಾಲಯಗಳು ರೋಮ್ ನಗರದಲ್ಲಿವೆ. ಅವು ಸೈಂಟ್ ಪೀಟರ್, ಸೈಂಟ್ ಜಾನ್ ಲಾತೆರಾನ್, ಸೈಂಟ್ ಪಾಲ್ ಹಾಗೂ ಸೈಂಟ್ ಮೇರಿ ಮೇಜರ್. ಇವೆಲ್ಲವೂ ಒಂದರಿಂದ ಇನ್ನೊಂದು ಕೆಲವೇ ಮೈಲುಗಳ ಅಂತರದಲ್ಲಿವೆ. ವ್ಯಾಟಿಕನ್ ರಾಷ್ಟ್ರದಲ್ಲಿರುವ (ವಿಶ್ವದ ಅತ್ಯಂತ ಕಿರಿದಾದ ರಾಷ್ಟವಿದು) ಸೈಂಟ್ ಪೀಟರ್ ಬಾಸಿಲಿಕಾದ ಆವರಣದಲ್ಲಿಯೇ ಪೋಪ್ ಅವರ ನಿವಾಸ ಹಾಗೂ ವಿವಿಧ ಕಛೇರಿಗಳಿವೆ.
‘ಕಿರಿಯ ಬಸಿಲಿಕ’ ಎಂಬ ಅಭಿದಾನವನ್ನು ವಿಶ್ವದಾದ್ಯಂತದಿಂದ ಆಯ್ದ ಕೆಲವು ಕಥೋಲಿಕ ದೇವಾಲಯಗಳಿಗೆ – ಕಥೋಲಿಕ ಧರ್ಮಸಭೆಯ ನಿಯಮಕ್ಕೆ ಅನುಗುಣವಾಗಿ- ನೀಡಲಾಗುತ್ತದೆ. ಒಂದು ದೇವಾಲಯವು ಬಸಿಲಿಕವಾಗಿ ಘೋಷಣೆಯಾಗಿ ಅದರ ಸಮರ್ಪಣೆಯಾದ ನಂತರ ‘ಬಸಿಲಿಕ’ದ ಧ್ವಜ ಹಾಗೂ ಮೊಹರಿನ ಮೇಲೆ ಪೋಪ್ ಜಗದ್ಗುರುಗಳ ಲಾಂಛನವಾದ ಅಡ್ಡ ಕೀಲಿ ಕೈಯನ್ನು ಬಳಸುವ ಹಕ್ಕು ಈ ‘ಕಿರಿಯ ಬಸಿಲಿಕ’ಕ್ಕೆ ಲಭ್ಯವಾಗುತ್ತದೆ. ‘ಕಿರಿಯ ಬಸಿಲಿಕ’ದ ಮುಖ್ಯಸ್ಥರು ತಮ್ಮ ಪೌರೋಹಿತ್ಯದ ಜವಾಬ್ದಾರಿಯನ್ನು ನಿರ್ವಹಿಸುವ ವೇಳೆಯಲ್ಲಿ ಧರಿಸುವ ಧಾರ್ಮಿಕ ಪೋಷಾಕಿನ ಮೇಲೆ ಕೆಂಪು ಕೊಳವೆ ಅಲಂಕಾರ, ಗುಂಡಿಗಳು, ಕಾಜಾ ಮತ್ತು ಕಪ್ಪು ಮೊಜೆಟ್ಟಾ ಕೊರಳಪಟ್ಟಿ ಧರಿಸುವ ಅವಕಾಶವನ್ನು ಪಡೆಯುತ್ತಾರೆ.
ಇತ್ತೀಚಿನ ಮಾಹಿತಿ ಪ್ರಕಾರ ವಿಶ್ವದಲ್ಲಿರುವ ಕಿರು ಮಹಾ ದೇವಾಲಯಗಳ ಸಂಖ್ಯೆ ಸಾಧಾರಣ 1750. 570 ಕಿರು ಮಹಾ ದೇವಾಲಗಳಿದ್ದು ಇಟಲಿ ಪ್ರಥಮ ಸ್ಥಾನದಲ್ಲಿದೆ. ಫ್ರಾನ್ಸ್ (171), ಪೋಲಂಡ್ (143), ಸ್ಪೈಯ್ನ್ (119), ಆಮೇರಿಕಾ (82), ಮೊದಲ ಐದು ಸ್ಥಾನಗಳಲ್ಲಿವೆ. ಗರಿಷ್ಠ ಜನಸಂಖ್ಯೆಯಿರುವ ಕಮ್ಯೂನಿಸ್ಟ್ ರಾಷ್ಟ್ರ ಚೀನಾದಲ್ಲು ಒಂದು ಬಸಿಲಿಕ ಇದೆ. ಮಧ್ಯ ಪ್ರಾಚ್ಯದ ಇಸ್ರೇಲ್‍ನಲ್ಲಿ 8 ಹಾಗೂ ಯೇಸುಕ್ರಿಸ್ತರ ನಾಡಾದ ಪ್ಯಾಲೆಸ್ಟೈನ್‍ನಲ್ಲಿ ಒಂದಿದೆ. ಪುಟ್ಟ ದ್ವೀಪ ರಾಷ್ಟ್ರ ಮಾಲ್ಟಾದಲ್ಲಿ 8 ಬಸಿಲಿಕಗಳಿವೆ.
22 ಕಿರಿಯ ಬಸಿಲಿಕಗಳಿರುವ ಭಾರತವು ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ನಂತರದ ಸ್ಥಾನವನ್ನು ಫಿಲಿಪೈನ್ಸ್ (13) ಪಡೆದಿದೆ. ದಕ್ಷಿಣ ಭಾರತದಲ್ಲಿ ಗೋವಾದ ಬೊಮ್ ಜೀಸಸ್, ಮುಂಬಯಿಯ ಮೌಂಟ್ ಮೇರಿ, ತಮಿಳ್ನಾಡಿನ ವೆಲ್ಲಂಕಣ್ಣಿ ಮಾತೆ ಹಾಗೂ ತಂಜಾವೂರಿನ ಪೂಂಡಿ ಮೈನರ್ ಬಸಿಲಿಕಗಳು ಬಹು ಖ್ಯಾತಿಯನ್ನು ಪಡೆದು ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಅತ್ತೂರು ಕಾರ್ಕಳದ ಸಂತ ಲಾರೆನ್ಸ್ ಬಸಿಲಿಕವು ಭಾರತದ 22 ನೇ ಬಸಿಲಿಕವಾಗಲಿದೆ. 1973 ರಲ್ಲಿ ಸ್ಥಾಪಿತಗೊಂಡ ಬೆಂಗಳೂರು ಶಿವಾಜಿನಗರದ ಸೈಂಟ್ ಮೇರಿ ಬಸಿಲಿಕವು ಈವರೆಗೆ ಕರ್ನಾಟಕದ ಏಕೈಕ ಬಸಿಲಿಕವಾಗಿತ್ತು.
‘ಕಿರಿಯ ಬಸಿಲಿಕ’ ಎಂದು ಕರೆಯಿಸಿಕೊಳ್ಳಬೇಕಿದ್ದರೆ ಆಯಾ ದೇವಾಲಯಗಳು ಕೆಲವಾರು ಪ್ರಮುಖ ಮಾನದಂಡಗಳನ್ನು ಯಶಸ್ವಿಯಾಗಿ ನಿಭಾಯಿಸಿರಬೇಕು. ಅಂಥಹ ದೇವಾಲಯಗಳು ದೇವರ ಆರಾಧನಾ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರಬೇಕು. ಅವು ಪ್ರಶಾಂತವೂ ವಿಶಾಲವೂ ಆಗಿರಬೇಕು. ಭವ್ಯವಾದ ಹಾಗೂ ದೊಡ್ಡದಾದ ಆರಾಧನಾ ಮಂಟಪವನ್ನು ಹೊಂದಿರಬೇಕು. ಅತ್ಯಂತ ಕಲಾತ್ಮಕವಾಗಿರಬೇಕು. ಅದಕ್ಕೆ ದೊಡ್ಡದಾದ ಇತಿಹಾಸವಿರಬೇಕು. (ಇತಿಹಾಸ ಹಾಗೂ ಧಾರ್ಮಿಕ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತೆ ಅಲ್ಲಿ ಸಂತರ ಪಾರ್ಥಿವ ಶರೀರವನ್ನಾಗಲೀ ಅಂಥವರ ಅವಶೇಷವನ್ನಾಗಲೀ ಸ್ಮಾರಕದೋಪಾದಿಯಲ್ಲಿ ಇರಿಸಬಹುದು. ಆ ನಿಮಿತ್ತವಾಗಿಯೇ ಆ ಆರಾಧನಾ ಕೇಂದ್ರವು ಯಾತ್ರಾ ಕೇಂದ್ರವಾಗಿ ಭಕ್ತರನ್ನು ಆಕರ್ಷಿಸಬಹುದು.)
ಒಂದು ದೇವಾಲಯ ‘ಬಸಿಲಿಕ’ ವೆಂಬ ಅಭಿದಾನವನ್ನು ಪಡೆಯುವ ಪ್ರಕ್ರಿಯೆ ಬಹಳ ದೀರ್ಘವಾದುದು. ಅದಕ್ಕೆ ಹಲವಾರು ವರ್ಷಗಳೇ ತಗಲುತ್ತವೆ. ಅತ್ತೂರು-ಕಾರ್ಕಳ ಸಂತ ಲಾರೆನ್ಸರ ದೇವಾಲಯವನ್ನು ‘ಬಸಿಲಿಕ’ ವಾಗಿಸುವ ಪ್ರಕ್ರಿಯೆಯನ್ನು ಆರಂಭಿಸಿ ಪ್ರಸ್ತಾವನೆಯನ್ನು ಭಾರತದಲ್ಲಿರುವ ವ್ಯಾಟಿಕನ್ ರಾಯಭಾರಿ ಪರಮಪೂಜ್ಯ ಸಾಲ್ವತೋರೆ ಪೆನ್ನಾಕ್ಕಿಯೊ ಇವರ ಮೂಲಕ ವ್ಯಾಟಿಕನ್‍ಗೆ ರವಾನಿಸಿ ಕೇವಲ ಒಂದೂವರೆ ತಿಂಗಳಲ್ಲಿ ಅನುಮತಿಯನ್ನು ದೊರೆತುದು ನಿಜಕ್ಕೂ ಪವಾಡಸದೃಶ. ಇದು ಭಾವೈಕ್ಯದ ತಾಣವಾದ ಅತ್ತೂರು ಕ್ಷೇತ್ರಕ್ಕೆ ಪ್ರಪಂಚದಾದ್ಯಂತ ಸಿಕ್ಕ ಮನ್ನಣೆ ಎನ್ನಬಹುದು.
‘ಬಸಿಲಿಕ’ವೆಂಬ ಅಭಿದಾನವನ್ನು ಪಡೆದ ಪವಿತ್ರಾಲಯದ ಜವಾಬ್ದಾರಿ ವಿಶೇಷ. ಪರಮ ಪವಿತ್ರ ಬಲಿಪೂಜೆ, ಪಶ್ಚಾತ್ತಾಪ ಹಾಗೂ ಇತರ ಸಂಸ್ಕಾರಗಳ ಆಚರಣೆಗೆ ಅಲ್ಲಿ ಆದ್ಯತೆ ಇರಬೇಕು. ಪಾಪ ನಿವೇದನೆಯ ನಿರ್ವಹಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಂಧಾನಕರ್ತರನ್ನು ನಿಯೋಜಿಸಬೇಕು. ಅಲ್ಲಿಯ ವ್ಯವಸ್ಥೆಗಳೆಲ್ಲವೂ ಶಾಸ್ತ್ರಬದ್ಧವಾಗಿರಬೇಕು. ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುವ ಖ್ಯಾತಿ ಪಡೆದ ಪ್ರಮುಖ ಆರಾಧನಾ ಕೇಂದ್ರವಾಗಿರಬೇಕು. ಆಚರಣೆಗೆ ಅಗತ್ಯವಾದ ಹಾಗೂ ವಿವಿಧ ಆರಾಧನಾ ನಿಯಮಗಳಿಗೆ ಒಗ್ಗುವ ಪರಿಕರಗಳಾದಿಯಾಗಿ ಸಕಲ ಸವಲತ್ತುಗಳನ್ನು ಹೊಂದಿರಬೇಕು. ಅಗತ್ಯಕ್ಕೆ ತಕ್ಕಂತೆ ಯಾಜಕರ ಸಂಖ್ಯೆಯೂ ಅಧಿಕವಾಗಿರಬೇಕು. ದೇವಾರಾಧನೆಗೆ ಪೂರಕವಾಗುವ ಸುಸಜ್ಜಿತ ಸಂಗೀತೋಪಕರಣಗಳೂ ಗಾಯನವೃಂದವೂ ಸದಾ ಸಿದ್ಧವಾಗಿರಬೇಕು. ದೇವಾಲಯದ ಚಾರಿತ್ರಿಕ ಮೌಲ್ಯಗಳನ್ನು ಬಿಂಬಿಸುವ ಕಲಾಕೃತಿಗಳಿಗೆ ಅಲ್ಲಿ ಸ್ಥಾನ ಕಲ್ಪಿಸಬೇಕು. ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ದೇವಾಲಯಯವು ಇವೆಲ್ಲವನ್ನೂ ಒಂದು ಹಂತದ ವರೆಗೆ ಹೊಂದಿಕೊಂಡಿದೆ ಹಾಗೂ ಹೊಂದಿಕೊಳ್ಳುತ್ತಲಿದೆ.
‘ಕಿರಿಯ ಬಸಿಲಿಕ’ದಲ್ಲಿ ವಿಶ್ವಾಸಿಗಳು ಸದಾ ಬಯಸುವ ಸರಣಿ ಉಪದೇಶ, ಸರಣಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ವರ್ಷದುದ್ದಕ್ಕೂ ನಡೆಯುವ ಆಚರಣೆಯಲ್ಲಿ ಆಗಮನ ಕಾಲ, ಕ್ರಿಸ್ತ ಜಯಂತಿ, ತಪಸ್ಸು ಕಾಲ ಹಾಗೂ ಪುನರುತ್ಥಾನ ಕಾಲವನ್ನು ಅಧಿಕ ಭಕ್ತಿನಿರ್ಭರತೆ ಹಾಗೂ ಆಸ್ತೆಯಿಂದ ಆಚರಿಸಬೇಕು. ದಿವ್ಯ ಬಲಿಪೂಜೆ, ಪ್ರಾತಃಕಾಲದ ಹಾಗೂ ಸಂಧ್ಯಾಕಾಲದ ಪ್ರಾರ್ಥನೆಗಳಲ್ಲಿ ವಿಶ್ವಾಸಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು. ದೈವಾರಾಧನೆಗೆ ಸಂಬಂಧಿಸಿದ ವಿಶೇಷ ಅಧಿಕಾರಗಳನ್ನು ಹಾಗೂ ಆರಾಧನೆಯ ಪರಿಣಾಮದಲ್ಲಿ ಲಭಿಸಬಹುದಾದ ಆಧ್ಯಾತ್ಮಿಕ ಫಲದ ಕೊಡುಗೆಯನ್ನು ಬಸಿಲಿಕದಲ್ಲಿ ಪ್ರಾರ್ಥಿಸುವವರಿಗೆ ಪ್ರತ್ಯೇಕ ದಿನಗಳಲ್ಲಿ ನೀಡಬೇಕು.
ಇವೆಲ್ಲ ದೇವಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದಾಗ ‘ಕಿರಿಯ ಬಸಿಲಿಕ’ ಎಂಬ ಅಭಿದಾನವು ಸಾರ್ಥಕ್ಯವನ್ನು ಕಾಣುವುದು. ಹಾಗಾಗಿಯೇ ಸಾಮಾನ್ಯ ಚರ್ಚುಗಳಿಗಿಂತ ಹೆಚ್ಚುವರಿಯಾಗಿ ಹಲವು ಸವಲತ್ತುಗಳನ್ನೂ ಹೆಚ್ಚಿನ ಜವಾಬ್ದಾರಿಯನ್ನೂ ವಿಶೇಷ ಕೀರ್ತಿಯನ್ನೂ ‘ಕಿರಿಯ ಬಸಿಲಿಕ’ವು ಪಡೆಯುತ್ತದೆ. ‘ಅತ್ತೂರು ಜಾತ್ರೆ’ಯೆಂದೇ ವಿಖ್ಯಾತವಾಗಿರುವ -ಜನವರಿ ಕೊನೆಯ ವಾರದಲ್ಲಿ ನಡೆಯುವ- ಜಾತ್ರೆಯನ್ನು ಕುರಿತು ಅರಿಯದ ಭಕ್ತಾದಿಗಳಿಲ್ಲ. ಅಂಥ ಸಕಲ ಭಕ್ತಾದಿಗಳು ಆ ‘ಜಾತ್ರೆ’ಯನ್ನು ಹಾಗೂ ಅಂಥ ಹಲವಾರು ಜಾತ್ರೆಗಳನ್ನು ಇನ್ನು ಮುಂದೆ ಅತ್ತೂರಿನ ‘ಕಿರಿಯ ಬಸಿಲಿಕ’ದಲ್ಲಿ ಆಚರಿಸಬಹುದಾಗಿದೆ.