Home Mangalorean News Kannada News ಅತ್ಯಾಚಾರ ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಅತ್ಯಾಚಾರ ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Spread the love

ಅತ್ಯಾಚಾರ ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ಪೈಶಾಚಿಕ ಕೃತ್ಯವಾಗಿದ್ದು; ಅತ್ಯಂತ ಖಂಡನೀಯ; ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ. ಪೊಲೀಸರೊಂದಿಗೆ ಸತತ ಸಂಪರಕದಲ್ಲಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಮಾಹಿತಿ ಬಂದ ತಕ್ಷಣ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಪೊಲೀಸರಿಗೆ ದಿಟ್ಟತನದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪೊಲೀಸರು ಕೂಡ ಘಟನೆ ಸಂಬಂಧಿಸಿದಂತೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ; ಇದರ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ; ಘಟನೆ ಸಂಬಂಧ ಯಾರೇ ಆಗಲಿ, ಯಾವುದೇ ಧರ್ಮದವರಾಗಲಿ ತಪ್ಪು ಮಾಡಿದರೆ, ತಕ್ಕ ಶಿಕ್ಷೆ ನೀಡುವುದಕ್ಕೆ ನಮ್ಮ ಪೊಲೀಸರಿಗೆ ಯಾವುದೇ ಹಿಂಜರಿಕೆಯಿಲ್ಲ. ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಮುಂದೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರಕಳಿಸದಂತೆ ಮುನ್ನಚ್ಚರಿಕೆ ವಹಿಸಬೇಕು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಂತ್ರಸ್ತ ಯುವತಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ; ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಗೆ ಜಿಲ್ಲಾಡಳಿತ ಮಾನಸಿಕ ಧೈರ್ಯ ನೀಡಿದ್ದು, ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.


Spread the love

Exit mobile version