ಅದಮಾರು ಪರ್ಯಾಯದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಅದಮಾರು ಶ್ರೀಪಾದದ್ವಯರ ಪರ್ಯಾಯ ಶ್ರೀಕೃಷ್ಣಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಇಂದು ಸಂಜೆ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಅದಮಾರು ಪರ್ಯಾಯ ಯಾವತ್ತೂ ಹೊಸತನಕ್ಕೆ ಹೆಸರಾದುದು. ಅವರ ಈ ಆಮಂತ್ರಣ ಪತ್ರಿಕೆಯಲ್ಲೂ ಅದು ಎದ್ದು ಕಾಣುತ್ತಿದೆ. ತಮ್ಮ ಪರ್ಯಾಯ ವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಶ್ರೀಗಳ ಸಂಕಲ್ಪದಂತೆ ಇದನ್ನು ರೂಪಿಸಲಾಗಿದೆ. ಪತ್ರಿಕೆ ಮೇಲಿರುವ ಲಾಂಛನವೂ ಅವರ ವಿಶೇಷತೆಯನ್ನು ಸಾರುವಂತಿದೆ ಎಂದು ಪಲಿಮಾರುಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಅದಮಾರು ಮಠದ ದಿವಾನರಾದ ಲಕ್ಷ್ಮಿನಾರಾಯಣ ಮುಚ್ಚಿಂತಾಯ, ಮಠದ ಮ್ಯಾನೇಜರ್ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಅದಮಾರು ಮಠದ ಗೋವಿಂದರಾಜ್, ಶ್ರೀಕೃಷ್ಣಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್, ಡಾ.ಭಾಸ್ಕರಾನಂದ ಕುಮಾರ್, ದಿನೇಶ್ ಪುತ್ರನ್, ಪ್ರೊ.ಶಂಕರ್, ಸಂತೋಷ್ಕುಮಾರ್ ಉದ್ಯಾವರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.