ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ – ಎಸ್ಪಿ ನಿಶಾ ಜೇಮ್ಸ್

Spread the love

ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ – ಎಸ್ಪಿ ನಿಶಾ ಜೇಮ್ಸ್

ಉಡುಪಿ: ಮೇ 23 ರಂದು ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದೊಳಗೆ ಆಗಮಿಸುವವರನ್ನು ಸೂಕ್ತ ತನಿಖೆ ನಡೆಸಿ, ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಿ, ಯಾವುದೇ ಕಾರಣಕ್ಕೂ ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದ್ದು, ಮೊಬೈಲ್ಗಳನ್ನು ತರದಂತೆ ಎಚ್ಚರವಹಿಸಿ ಎಂದು ಮತ ಎಣಿಕೆ ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ನಿಶಾ ಜೇಮ್ಸ್ ಹೇಳಿದ್ದಾರೆ.

ಅವರು ಬುಧವಾರ, ಸೈಂಟ್ ಸಿಸಿಲಿ ಶಾಲೆಯಲ್ಲಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮತ ಎಣಿಕೆ ದಿನ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಈಗಾಗಲೇ ನೀಡಲಾಗಿರುವ ವಿವಿಧ ರೀತಿಯ ಪಾಸ್ಗಳ ಕುರಿತು ಮಾಹಿತಿ ನೀಡಿದ ನಿಶಾ ಜೇಮ್ಸ್, ಮೊಬೈಲ್ ತರಲು ಯಾರಿಗೂ ಅವಕಾಶವಿಲ್ಲ, ಮಾಧ್ಯಮದವರಿಗೆ ಮಾತ್ರ ಮಾಧ್ಯಮ ಕೇಂದ್ರದೊಳಗೆ ಮೊಬೈಲ್ ಬಳಕೆಗೆ ಅವಕಾಶ ಇದೆ, ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮಗೆ ನಿಯೋಜಿಸಿರುವ ಸ್ಥಳದಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸುವಂತೆ ಹಾಗೂ ಈಗಾಗಲೇ ಸೂಚಿಸಿರುವಂತೆ ಮತ ಎಣಿಕೆ ಕೇಂದ್ರದ ಹೊರಗೆ ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದರು.

ಮತ ಎಣಿಕೆಯ ಭದ್ರತೆಗಾಗಿ, ಕೇಂದ್ರದ ಒಳಗೆ ಮತ್ತು ಹೊರಗೆ, 1 ಸಿ.ಆರ್.ಪಿ.ಎಫ್ ತುಕಡಿ, 3 ಕೆ.ಎಸ್.ಆರ್.ಪಿ. ತುಕಡಿ, 30 ಹೋಂ ಗಾಡ್ರ್ಸ್, 335 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 534 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತಾ ಧೃಷ್ಠಿಯಿಂದ 130 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿದ್ದು, ಎಣಿಕೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯ ಮುಂಭಾಗದಿಂದ ಮತ ಎಣಿಕೆ ಕೆಂದ್ರಕ್ಕೆ ಪ್ರವೇಶ ಕಲ್ಪಿಸಲಾಗಿದೆ ಎಂದು ಎಸ್ಪಿ ಹೇಳಿದರು.

ಸಭೆಯಲ್ಲಿ ಎಎಸ್ಪಿ ಕೃಷ್ಣಕಾಂತ್, ಕುಮಾರ್ ಚಂದ್ರ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love