ಅನಗತ್ಯ ಒಡಾಟಕ್ಕೆ ಬ್ರೇಕ್ ಹಾಕಲು ಅನಿವಾರ್ಯವಾಗಿ ರಸ್ತೆಗಿಳಿದ ಕುಂದಾಪುರ ಪೊಲೀಸರು- ಬೈಕುಗಳ ವಶ

Spread the love

ಅನಗತ್ಯ ಒಡಾಟಕ್ಕೆ ಬ್ರೇಕ್ ಹಾಕಲು ಅನಿವಾರ್ಯವಾಗಿ ರಸ್ತೆಗಿಳಿದ ಕುಂದಾಪುರ ಪೊಲೀಸರು- ಬೈಕುಗಳ ವಶ

ಕುಂದಾಪುರ: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿ ಇಂದಿಗೆ ಹದಿನೆಂಟು ದಿನಗಳೇ ಕಳೆದಿವೆ. ಆದರೂ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಇನ್ನೂ ಬ್ರೇಕ್ ಹಾಕಿಲ್ಲ. ಪೊಲೀಸರು ಬುದ್ಧಿವಾದ ಹೇಳುವುದು ಕೂಡ ತಪ್ಪಿಲ್ಲ.

ಹೌದು ಶನಿವಾರ ಕುಂದಾಪುರ ಠಾಣಾ ವ್ಯಾಪ್ತಿಯ ಕೋಟೆಶ್ವರದಲ್ಲಿ ಜಿಲ್ಲಾಡಳಿತ ನೀಡಿದ ಸಮಯದ 11 ಗಂಟೆಯ ಬಳಿಕ ರಸ್ತೆಗಿಳಿದ ಬೈಕುಗಳನ್ನು ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದ್ದಾರೆ. ಲಾಠಿ ಹಿಡಿದು ರಸ್ತೆಗಿಳಿದ ಪೊಲೀಸರು, ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರೂ ಕೇಳದ ಜನರಿಗೆ ಒಳ್ಳೆಯ ಪಾಠನೇ ಕಲಿಸಿದ್ದಾರೆ.

ಯಾವುದೇ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರೆಲ್ಲರೂ ದಿನಸಿ ಖರೀದಿಗೆ ಗುಂಪುಗುಂಪಾಗಿ ಜಮಾಯಿಸಿದ್ದು, ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು.ಸಾಮಾಜಿ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡದ ಅಂಗಡಿ ಮಾಲೀಕರಿಗೆ ಪಿಎಸ್ಐ ಹರೀಶ್ ಆರ್ ನಾಯ್ಕ್ ಖಡಕ್ ಎಚ್ಚರಿಕೆ ನೀಡಿದರು. ಸಾಕಷ್ಟು ಜನದಟ್ಟಣೆಯಿಂದ ಕೂಡಿದ ಕೋಟೇಶ್ವರ ಪೇಟೆ 11 ಗಂಟೆಯ ಬಳಿಕ ಖಾಲಿ-ಖಾಲಿಯಾಯಿತು.

ಬಳಿಕ ವಾಹನ ತಪಾಸಣೆಗೆ ಮುಂದಾದ ಠಾಣಾಧಿಕಾರಿ 11 ಗಂಟೆಯ ಬಳಿಕ ರಸ್ತೆಗೆ ಬಂದ ವಾಹನ ಸವಾರರನ್ನು ತಪಾಸಣೆ ನಡೆಸಿ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡರು. ಅಗತ್ಯ ವಸ್ತುಗಳನ್ನು ತರಲು, ಮೆಡಿಕಲ್ ಹಾಗೂ ಆಸ್ಪತ್ರೆಗೆ ಹೋಗುವವರನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳನ್ನು ವಶಕ್ಕೆ ಪಡೆದರು. ವಶಪಡಿಸಿಕೊಂಡ ಬೈಕ್ಗಳನ್ನು ಕುಂದಾಪುರ ಠಾಣೆಗೆ ರವಾನಿಸಲಾಗಿದೆ.

ಅನಾವಶ್ಯಕವಾಗಿ ರಸ್ತೆಗೆ ಬಂದ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಲಾಕ್ಡೌನ್ ಮುಗಿಯುವ ತನಕ ವಾಹನ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ನಾನಾ ಕಾರಣ ಹೇಳಿ ಓಡಾಡುತ್ತಿರುವ ವಾಹನ ಸವಾರರಿಗೆ ಕುಂದಾಪುರ ನಗರ ಪಿಎಸ್ಐ ಹರೀಶ್ ಆರ್ ನಾಯ್ಕ್ ಕಾನೂನು ಪಾಠ ಹೇಳಿದ್ದಾರೆ. ಇಷ್ಟೆಲ್ಲ ದಿನವಾದರೂ ಕೊರೊನಾ ಲಾಕ್ಡೌನ್ ಬಗ್ಗೆ ಮಾಹಿತಿ ಇದ್ದರೂ ಇನ್ನೂ ಜನರಿಗೆ ಜಾಗೃತಿ ಮೂಡಿಲ್ಲ ಎಂಬುದೇ ವಿಪರ್ಯಾಸ.


Spread the love