ಅನಧಿಕೃತವಾಗಿ ಮರಳುಗಾರಿಕೆ ದಕ್ಕೆಗೆ ದಾಳಿ – ರೂ 1.5 ಕೋಟಿ ಮೌಲ್ಯದ ಸೊತ್ತು ವಶ
ಮಂಗಳೂರು: ಪಲ್ಗುಣಿ ನದಿಯಲ್ಲಿ ಮತ್ತು ನದಿಯ ತೀರದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸುಮಾರು ರೂ 1 ಕೋಟಿ 20 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ರವಿರಾಜ್ ಎಂಬವರಿಗೆ ಸೇರಿದ ಖಾಸಗಿ ದಕ್ಕೆ, ಪಾಲ್ಗುಣಿ ನದಿಯಲ್ಲಿ ಮತ್ತು ನದಿಯ ತೀರದಲ್ಲಿ ಯೂಸುಫ್ ಉಳಾಯಿಬೆಟ್ಟು, ಇಸಾಕ್ ಉಲಾಯಿಬೆಟ್ಟು, ಅಸನ್ ಉಳಾಯಿಬೆಟ್ಟು, ಶರೀಫ್ ಉಳಾಯಿಬೆಟ್ಟು, ವಿನಯ್ ಶೆಟ್ಟಿ ಹಾಗೂ ಯಶವಂತ ಆಳ್ವ ಎಂವರುಗಳು ಸಿ ಆರ್ ಜೆಡ್್ ವ್ಯಾಪ್ತಿಯಲ್ಲಿ ಬರುವ ನದಿ ತೀರದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿಯಂತೆ ಫೆಬ್ರವರಿ 2 ರಂದು ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಸಿಬಂದಿಯವರು, ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ಪೊಲೀಸ್ ನೀರಿಕ್ಷಕ ಸಿದ್ದಗೌಡ ಹೆಚ್ ಭಜಂತ್ರಿ, ಪಿಎಸ್ ಐ ವೆಂಕಟೇಶ್ ಐ, ಎಸ್ ಐ ಹರೀಶ್ ಮತ್ತು ಸಿಬಂದಿಯವರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ಧೇಶಕರಾದ ಪದ್ಮಶ್ರೀ ಮತ್ತು ಅಧಿಕಾರಿಯಾದ ಮೂರ್ತಿ ಸಿಬಂದಿಯವರು ಜಂಟಿಯಾಗಿ ದಾಳಿ ನಡೆಸಿದಾಗ ಸ್ಥಳದಲ್ಲಿ 42 ಮರಳು ತೆಗೆಯಲು ಉಪಯೋಗಿಸುವ ದೋಣಿಗಳು, 5 ಟಿಪ್ಪರ್ ಲಾರಿಗಳು, 3 ಡೋಜರ್ ಮತ್ತು ದಕ್ಕೆಯ್ಲಲಿ ಅಲ್ಲಲ್ಲಿ ಸಂಗ್ರಹಿಸಿದ ಮರಳು ರಾಶಿಗಳು ಪತ್ತೆ ಹಚ್ಚಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು 1 ಕೋಟಿ 20 ಲಕ್ಷ ರೂಪಾಯಿ ಆಗಬಹುದು.
ಇದೇ ದಿನ ತುಂಬೆ ಎಂಬಲ್ಲಿ ಮರಳು ತುಂಬಿಸಿದ ಒಂದು ಟಿಪ್ಪರ್ ಲಾರಿಯು ಪರವಾನಿಗೆಯಲ್ಲಿ ನೀಡಿದ ಮಾರ್ಗ ಉಲ್ಲಂಘನೆ ಮಾಡಿ ಅರ್ಕುಳದ ಕಡೆ ಬಂದಿದ್ದು, ಸದರಿ ವಾಹನವನ್ನು ಸ್ವಾಧೀನಪಡಿಸಿಕೊಂಡ ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ವಾಹನ ಮತ್ತು ಸ್ವತ್ತಿನ ಮೌಲ್ಯ ರೂಪಾಯಿ 10 ಲಕ್ಷ 20 ಸಾವಿರ ರೂಪಾಯಿ ಆಗಿರುತ್ತದೆ.