ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಜೂನ್ 15 ಕೊನೆ ದಿನ

Spread the love

ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಜೂನ್ 15 ಕೊನೆ ದಿನ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳನ್ನು ಸಿರಿವಂತರು ಸಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿರುತ್ತದೆ. ಅನರ್ಹರು ಪಡೆದು ಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಹಲವಾರು ಬಾರಿ ಎಚ್ಚರಿಕೆ ನೀಡುವುದರೊಂದಿಗೆ ಗಡುವನ್ನೂ ನೀಡಲಾಗಿತ್ತು. ಆದರೆ ಮತ್ತೊಮ್ಮೆ ಕೊನೆಯ ಅವಕಾಶ ನೀಡಿ ಕೂಡಲೇ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಚೀಟಿಗಳನ್ನು ಒಂದು ವಾರದೊಳಗೆ ಜೂನ್ 15 ರೊಳಗೆ ಸಂಬಂಧಪಟ್ಟ ಕಚೇರಿಗೆ ಹಿಂದಿರುಗಿಸಲು ತಿಳಿಸಿದೆ.

ಒಂದು ವೇಳೆ ತಾವಾಗಿಯೇ ಹಿಂದಿರುಗಿಸದಿದ್ದಲ್ಲಿ ಅಂತಹ ಕುಟುಂಬಗಳನ್ನು ಇಲಾಖೆಯಿಂದಲೇ ಪತ್ತೆ ಮಾಡಿ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ಹೂಡುವುದು ಮಾತ್ರವಲ್ಲದೆ ಮುಕ್ತ ಮಾರುಕಟ್ಟೆ ದರದಲ್ಲಿ ಪಡಿತರ ಸಾಮಾಗ್ರಿಯ ದರವನ್ನು ವಸೂಲಿ ಮಾಡಲಾಗುವುದು.

ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲದ ಕುಟುಂಬಗಳು:. ಸರ್ಕಾರದ ಅಥವಾ ಸರಕಾರಿ ಅನುದಾನಿತ ಅಥವಾ ಸರಕಾರಿ ಸ್ವಾಮ್ಯದ ಸಂಸ್ಥೆಗಳ/ ಮಂಡಳಿಗಳ/ ನಿಗಮಗಳ/ ಸ್ವಾಯತ್ತ ಸಂಸ್ಥೆಗಳ ಎಲ್ಲಾ ಖಾಯಂ ನೌಕರರು ಮಾತ್ರವಲ್ಲದೆ, ಆದಾಯ ತೆರಿಗೆ/ಸೇವಾ ತೆರಿಗೆ/ಜಿ.ಎಸ್.ಟಿ/ವೃತ್ತಿ ತೆರಿಗೆ ಪಾವತಿಸುವವರು, ಹಾಗೂ ತಮ್ಮ ಪಡಿತರ ಚೀಟಿಯಿಂದ ಉದ್ದೇಶ ಪೂರ್ವಕವಾಗಿ ಅಂತಹ ಕುಟುಂಬ ಸದಸ್ಯರ ಹೆಸರನ್ನು ತೆಗೆಸಿರುವವರು.

ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಆಸ್ಪತ್ರೆ ನೌಕರರು, ವೈದ್ಯ/ಇಂಜಿನಿಯರ್/ವಕೀಲ, /ಆಡಿಟರ್ ಮುಂತಾದ ವೃತ್ತಿಪರರು, ದೊಡ್ಡ ಅಂಗಡಿ , ಹೋಟೆಲ್ ವ್ಯಾಪಾರಸ್ತರು ಇತ್ಯಾದಿ.

ಸ್ವಂತ ಉಪಯೋಗಕ್ಕಾಗಿ ಕಾರು/ ಲಾರಿ/ ಜಿಸಿಬಿ /ಟ್ರಾಕ್ಟರ್ ಇತ್ಯಾದಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು.

ಅನುದಾನಿತ ಶಾಲಾ ಕಾಲೇಜುಗಳ ನೌಕರರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವವರು, ಬಹು ರಾಷ್ಟ್ರೀಯ ಕಂಪೆನಿ ಉದ್ದಿಮೆದಾರರು.

ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ದೊಡ್ಡದಾದ ಮನೆಯನ್ನು ಹೊಂದಿರುವವರು ಅನರ್ಹರುವಾಗಿರುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love