ಅನಾರೋಗ್ಯದ ಸುಳ್ಳು ನೆಪವೊಡ್ಡಿ ಉಡುಪಿ ಜಿಲ್ಲೆ ಪ್ರವೇಶಕ್ಕೆ ಪ್ರಯತ್ನ – ಮಹಾರಾಷ್ಟ್ರ ಅಂಬುಲೆನ್ಸ್ ವಶಕ್ಕೆ
ಉಡುಪಿ: ಹೊರ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಯಾರೂ ಬಾರದಂತೆ ಗಡಿ ಲಾಕ್ ಡೌನ್ ಮಾಡಿದ್ರೂ ಕಳ್ಳ ಸಂಚಾರ ನಿಂತಿಲ್ಲ. ಕೆಲವೊಂದು ವ್ಯಕ್ತಿಗಳು ಸುಳ್ಳು ನೆಪ ಹೇಳಿ ಜಿಲ್ಲೆಯೊಳಗೆ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನೆಪವೊಡ್ಡಿ ಜಿಲ್ಲೆಗೆ 6 ಮಂದಿ ಮಹಾರಾಷ್ಟ್ರ ರಾಜ್ಯದ ನೊಂದಣಿ ಇರುವ ಅಂಬುಲೆನ್ಸ್ ನಲ್ಲಿ ಜಿಲ್ಲೆಯ ಗಡಿ ಪ್ರವೇಶ ಮಾಡಿದ್ದು ಅಂಬುಲೆನ್ಸ್ ವಶಕ್ಕೆ ಪಡೆದು ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಳಿದ ಐದು ಮಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂಧಕಾಜ್ಞೆ ಜ್ಯಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ ಹಾಗೂ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಅವಶ್ಯಕ ಅನುಮತಿಯಿಲ್ಲದೆ ಯಾವುದೇ ವಾಹನಗಳು ಒಳ ಬಾರದಂತೆ ಕ್ರಮ ವಹಿಸಲಾಗಿದೆ.
ಈ ನಡುವೆ ಮಹಾರಾಷ್ಟ್ರ ರಾಜ್ಯದ ನೊಂದಣಿಯಾಗಿರುವ ಅಂಬುಲೆನ್ಸ್ ನಲ್ಲಿ ಅನಾರಗೋಗ್ಯದಿಂದ ಬಳಲುತ್ತಿದ್ದಾರೆ ಎಂದು ಒಬ್ಬ ವ್ಯಕ್ತಿಯ ಜೊತೆಗೆ ಇಬ್ಬರು ಸಂಗಡಿಗರು ಚಾಲಕ ಹಾಗೂ ಸಹಾಯಕರನ್ನೊಳಗೊಂಡಂತೆ ಒಟ್ಟು 6 ಜನ ಏಪ್ರಿಲ್ 13ರಂದು ಸಂಜೆ 7 ಗಂಟೆಗೆ ಮುಂಬೈನಿಂದ ಹೊರಟು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಏಪ್ರಿಲ್ 14ರಂದು ಬಂದಿರುತ್ತಾರೆ. ಕೆಎಮ್ ಸಿ ಆಸ್ಪತ್ರೆಯವರು ಈ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಈ ಪ್ರಕರಣವು ಸಂಶಯಾಸ್ಪದವಾಗಿದೆ ಎಂದು ಮಾಹಿತಿ ನೀಡಿದಂತೆ ಪರಿಶೀಲಿಸಲಾಗಿ ಮುಂಬೈಯಿಂದ ಮಣಿಪಾಲಕ್ಕೆ ಬರಲು ಸರಕಾರದಿಂದ ಆಗಲಿ ಅಥವಾ ಅಧಿಕೃತ ದೃಢೀಕರಣ ಪಡೆದಿರುವುದಿಲ್ಲ.
ಈ ಪ್ರಯುಕ್ತ ಮುಂಬೈಯಿಂದ ಬಂದಿರುವ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐದು ಜನರನ್ನು ಎಸ್ ಡಿ ಎಮ್ ಕಾಲೇಜು ಉದ್ಯಾವರ ಇಲ್ಲಿ 28 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿರುತ್ತದೆ. ಇದರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸದ್ರಿಯವರಿಂದಲೇ ಭರಿಸಲಾಗುವುದು. ಅಲ್ಲದೆ ಅಂಬುಲೆನ್ಸ್ ವಾಹನವನ್ನು ಈಗಾಗಲೇ ಪೊಲೀಸ್ ಸುಪರ್ದಿಗೆ ಪಡೆದುಕೊಂಡಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಸಹಕರಿಸಲು ಜಿಲ್ಲಾಧಿಕಾರಿ ಜಿ ಜಗದೀಶ್ ಕೋರಿದ್ದಾರೆ.