ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಾಲ್ಕನೇ ಬಾರಿ ವೇಷ ಹಾಕಿದ ರವಿ ಕಟಪಾಡಿ

Spread the love

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಾಲ್ಕನೇ ಬಾರಿ ವೇಷ ಹಾಕಿದ ರವಿ ಕಟಪಾಡಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ಸೆ.13 ಮತ್ತು 14 ರಂದು ವಿಭಿನ್ನ ಶೈಲಿಯ ವೇಷ ಹಾಕಿ ಅದರಿಂದ ಬಂದ ಲಕ್ಷಾಂತರ ರೂಪಾಯಿ ಹಣವನ್ನು ಅನಾರೋಗ್ಯ ಪೀಡಿತರಿಗೆ ದೇಣಿಗೆ ನೀಡಿ ಹೆಸರುವಾಸಿಯಾಗಿರುವ ಕಟಪಾಡಿ ಜೆ.ಎನ್.ನಗರ ಕಾಲೊನಿಯ ಯುವಕ ಸೆಂಟ್ರಿಂಗ್ ರವಿ ಈ ಬಾರಿ ಕ್ರಾಂಪಸ್ ವೇಷ ಹಾಕಿ ಬೀದಿಗಿಳಿದು ದೇಣಿಗೆ ಸಂಗ್ರಹಕ್ಕೆ ಹೊರಟಿದ್ದಾರೆ.

 ಕಳೆದ ಮೂರು ವರ್ಷಗಳಿಂದ ಸುಮಾರು ರೂ 9 ಲಕ್ಷ ಸಾಮಾಜಿಕ ಸೇವೆಗೆ ನೆರವು ನೀಡಿ ಗಮನ ಸೆಳೆದಿ ರುವ ರವಿ ಮತ್ತು ಅವರ ಗೆಳೆಯರು, ಈ ಬಾರಿ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ    ವೇಷ ಹಾಕಿಯೇ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡಮಕ್ಕಳ ಬಾಳಿಗೆ ಆಶಾಕಿರಣವಾಗಿ ಮೂಡಿಬಂದಿರುವ ಕಟಪಾಡಿಯ ರವಿ ಮತ್ತು ರವಿ ಫ್ರೆಂಡ್ಸ್ ಬಳಗದವರು ಕಾರ್ಯಪ್ರವೃತ್ತರಾಗಿದ್ದಾರೆ. ತಮಗೆ ಬಡತನವಿದ್ದರೂ ಇತರರ ನೋವಿಗೆ ಸ್ಪಂದಿಸುವ ಹೃದಯ ವಿಶಾಲತೆ ಯನ್ನು ಹೊಂದಿರುವ ಈ ತಂಡ, ಅನಾರೋಗ್ಯದಿಂದ ಬಳಲುತ್ತಿರುವ ನಾಲ್ಕು ಬಡಮಕ್ಕಳ ಜೀವರಕ್ಷಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಅನಾರೋಗ್ಯದಿಂದ ಬಳಲುತ್ತಿರುವ 4 ಬಡ ಮಕ್ಕಳಾದ ಮೂಡಬಿದರೆಯ ಧರೆಗುಡ್ಡೆ – ಪಣಪಿಲ ಪುನಿಕೆಬೆಟ್ಟುವಿನ ಒಂದುವರೆ ವರ್ಷದ ಲಾವಣ್ಯ, ಶಿವಮೊಗ್ಗದ ಶಾಹೀನಾ ಅವರ ಪುತ್ರಿ ಮೆಹಕ್, ಉಡುಪಿ ದೆಂದೂರುಕಟ್ಟೆಯ ಸುನೀತಾ ಪ್ರಕಾಶ ಅವರ ಒಂದುವರೆ ತಿಂಗಳಿನ ಮಗು ಹಾಗೂ ಬನ್ನಂಜೆಯ ಎಳೆಯ ಮಗುವಿಗೆ ಈ ಬಾರಿ ಸಹಾಯ ಹಸ್ತ ನೀಡಲು ರವಿ ಮುಂದಾಗಿದ್ದಾರೆ.

ಆಧುನಿಕ ಮಾದರಿಯ ಅದರಲ್ಲೂ ಹಾಲಿವುಡ್, ಎನಿಮೇಷನ್ ಚಿತ್ರಗಳಿಂದ ಆಯ್ದ ಮಾದರಿಯ ಕಲಾತ್ಮಕವೇಷ ಹಾಕುವುದರಲ್ಲಿ ನಿಷ್ಣಾತರಾಗಿರುವ ರವಿ ಕಟಪಾಡಿ ಅವರು ಪ್ರತೀ ವರ್ಷ ತಾನು ಹಾಕುವ ವೇಷದ ಬಗ್ಗೆಯೂ ಕುತೂಹಲ ಮೂಡಿಸುವಲ್ಲಿ ನಿಸ್ಸೀಮರು. ಈ ಬಾರಿ ಕ್ರಾಂಪಸ್ ವೇಷದಲ್ಲಿ ದೇಣಿಗೆ ಸಂಗ್ರಹಕ್ಕೆ ಇಳಿದಿದ್ದಾರೆ. ವೇಷ ಹಾಕಿ ಕೇವಲ ಜನರಿಂದ ಹಣ ಸಂಗ್ರಹಿಸುವುದಲ್ಲದೆ ಸ್ವತಃ ರವಿ ಅವರು ತಿಂಗಳ ಪ್ರತಿ ಶನಿವಾರದ ಸಂಬಳದಲ್ಲಿ ಸ್ವಲ್ಪ ಹಣವನ್ನು ಇದಕ್ಕಾಗಿ ತೆಗೆದಿರಿಸುತ್ತಾರೆ.

2014ರಲ್ಲಿ ಫ್ರಾನ್ಸ್ ಲೆಬ್ರೆಂತ್ ವೇಷ ಹಾಕಿ ರೂ. 1.04 ಲಕ್ಷ ಸಂಗ್ರಹಿಸಿ ಎಳ್ಳಂಪಳ್ಳಿಯ ಮೂಕಾಂಬಿಕ ಅವರ ಮಗಳು ಅನ್ವಿತಾಳ ಶಸ್ತ್ರ ಚಿಕಿತ್ಸೆಗೆ ನೀಡಿ ಗಮನಸೆಳೆದರು. ಈ ಸೇವೆಯಿಂದ ಪ್ರೇರಿತರಾಗಿ 2015ರಲ್ಲಿ ಮತ್ತೆ ಆಕರ್ಷಕ ಲಿಜಾರ್ಡ್ ಮ್ಯಾನ್ ವೇಷಧರಿಸಿ ₹ 3.20ಲಕ್ಷ ಸಂಗ್ರಹಿಸಿ ವಿವಿಧೆಡೆಯ 4 ಮಕ್ಕಳ ಆರೋಗ್ಯ ನೆರವಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಕೆ.ಅಣ್ಣಾಮಲೈ ಅವರ ಮೂಲಕ ವಿತರಿಸಿದರು.  ಇವರಿಂದ ಪ್ರೇರಿತರಾಗಿ ಎಸ್ಪಿ ಕೆ.ಅಣ್ಣಾಮಲೈ ಅವರು ಕೂಡಾ ರೂ 10 ಸಾವಿರ ದೇಣಿಗೆ ಮಕ್ಕಳಿಗೆ ನೀಡಿದ್ದರು. ಈ ಜನಸೇವೆಯನ್ನು ಮುಂದುವರಿಸುತ್ತಾ 2016 ರಲ್ಲಿ ಕೂಡಾ 4 ಮಕ್ಕಳ ಆರೋಗ್ಯ ನೆರವಿಗೆ  ಮಮ್ಮಿ ರಿಟರ್ನ್‌ ಸಿನೆಮಾದ ಮಮ್ಮಿ ವೇಷ ವೇಷಹಾಕಿ ದೇಣಿಗೆ ಸಂಗ್ರಹಿಸಿ ಅಂದಿನ ಜಿಲ್ಲಾ ಪಂಚಾಯತ್ ಸಿಇಒ ಪ್ರಸ್ತುತ ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ವಿತರಿಸಿದ್ದರು. ಪುನಃ ಈ ವರ್ಷ ಕ್ರಾಂಪಸ್ ವೇಷದಲ್ಲಿ ಮತ್ತೆ ನಾಲ್ಕು ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ರವಿ ಮತ್ತವರ ಫ್ರೆಂಡ್ಸ್ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ.

ವೇಷ ಹಾಕಿ ಸಂಗ್ರಹವಾದ ಹಣವನ್ನು ಸಮನಾಗಿ ಹಂಚಿ ನಾಲ್ವರು ಮಕ್ಕಳ ಚಿಕಿತ್ಸೆಗೆ ನೀಡಲಿದ್ದು ಸೆ. 19 ರಂದು ಸಾಯಂಕಾಲ 4 ಗಂಟೆಗೆ ಕಟಪಾಡಿಯಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಗುತ್ತದೆ.

 


Spread the love