ಅನಿವಾಸಿ ಕನ್ನಡಿಗರ ಒಕ್ಕೂಟ ಅಬುಧಾಬಿ ವತಿಯಿಂದ ಯುಎಇ ನ್ಯಾಷನಲ್ ಡೇ ಕಪ್ ಕ್ರಿಕೆಟ್ ಪಂದ್ಯಾಟ
ಅಬುಧಾಬಿ: ಅನಿವಾಸಿ ಕನ್ನಡಿಗರ ಒಕ್ಕೂಟ, ಅಬುಧಾಬಿ ವತಿಯಿಂದ ಯುಎಇ ನ್ಯಾಷನಲ್ ಡೇ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಯಿತು . ಈ ಪಂದ್ಯಾಟಕ್ಕೆ ಕರ್ನಾಟಕದ ವಿವಿದ ಜಿಲ್ಲೆಗಳ 6 ತಂಡಗಳ ಆಹ್ವಾನಿಸಲಾಯಿತು. ಕರ್ನಾಟಕ ವಾರಿಯರ್ಸ್, ಅಬುಧಾಬಿ ಟೈಗರ್ಸ್, ಟೀಮ್ ಮುಸಾಫ್ಫಾ, ಎಲೆಕ್ಟ್ರಾ ಚಾಲೆಂಜರ್ಸ್ , ಅರೇಬಿಯನ್ ಲಯನ್ಸ್ ಹಾಗು ಎಲೆಕ್ಟ್ರಾ ರಾಯಲ್ಸ್ ತಂಡಗಳು ಭಾಗವಹಿಸಿದ್ದವು.
ಉದ್ಘಾಟನಾ ಪಂದ್ಯದಲ್ಲಿ ಎಲೆಕ್ಟ್ರಾ ಚಾಲೆಂಜರ್ಸ್ ತಂಡವು ಸುಲಭವಾಗಿ ಅಬುಧಾಬಿ ಟೈಗರ್ಸ್ ತಂಡವನ್ನು ಮಣಿಸಿ ನೇರ ಸೆಮಿಫೈನಲ್ ಗೆ ಏರಿತು.
ಸಾದಿಕ್ ಶೃಂಗೇರಿಯವರ ಅಮೋಘ ಅರ್ಧ ಶತಕದ ನೆರವಿನಿಂದ ಟೀಮ್ ಮುಸಾಫ್ಫಾ ತಂಡವು ಕರ್ನಾಟಕ ವಾರಿಯರ್ಸ್ ತಂಡದ ಮೇಲೆ ಸವಾರಿ ಮಾಡಿ ಸೆಮಿಫೈನಲ್ ಗೆ ರಹದಾರಿ ಪಡೆಯಿತು.
ಮತ್ತೊಂದು ಪಂದ್ಯದಲ್ಲಿ ಅರೇಬಿಯನ್ ಲಯನ್ಸ್ ಕೊಟ್ಟ ಕಠಿಣ ಸ್ಪರ್ಧೆಯನ್ನು ಗೆಲುವನ್ನಾಗಿಸಿದ ಎಲೆಕ್ಟ್ರಾ ರಾಯಲ್ಸ್ ತಂಡವು ಸೆಮಿಫೈನಲ್ ಗೆ ಪ್ರವೇಶಿಸಿತು.
ಕುತೂಹಲ ಘಟ್ಟ ಮೂಡಿಸಿದ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನಾಲ್ಕು ರನ್ ಅವಶ್ಯಕತೆ ಇದ್ದಾಗ ತಂಡದ ನಾಯಕ ಹಾರೂನ್ ಕೊಡ್ಲಿಪೇಟ್ ರವರು ಬೌಂಡರಿ ಚಚ್ಚಿ ಕರ್ನಾಟಕ ವಾರಿಯರ್ಸ್ ತಂಡವನ್ನು ಸೆಮಿಫೈನಲ್ ಗೆ ಏರಿಸಿದರು.
ರೋಮಾಂಚಕಾರಿಯಾದ ಮೊದಲ ಸೆಮಿಫೈನಲ್ ಜನಾಬ್ ಸಾದಿಕ್ ರವರು ಅರ್ಧ ಶತಕ ಗಳಿಸಿ ತಮ್ಮ ತಂಡವಾದ ಟೀಮ್ ಮುಸಾಫ್ಫಾವನ್ನು ಫೈನಲ್ ಗೇರಿಸಿದರು. ಎರಡನೇ ಸೆಮಿಫೈನಲ್ ನಲ್ಲಿ ಸಾಂಘಿಕ ಪ್ರಯತ್ನ ನಡೆಸಿದ ಕರ್ನಾಟಕ ವಾರಿಯರ್ಸ್ ಗೆಲುವಿನ ನಗೆ ಬೀರಿತು.
ಪ್ರತಿಯೊಂದು ಎಸೆತದಲ್ಲೂ ಕುತೂಹಲ ಮೂಡಿಸಿದ ಫೈನಲ್ ಪಂದ್ಯದಲ್ಲಿ ಗೆಲುವು ಎರಡು ತಂಡಗಳ ಮದ್ಯೆ ಅತ್ತಿಂದಿತ್ತ ಓಡಿ ಕೊನೆಗೆ ಟೀಮ್ ಮುಸಾಫ್ಫಾದ ಕೊರಳಿಗೆ ಬಿತ್ತು. ಅಜೇಯ ಆಟ ಆಡಿದ ಟೀಮ್ ಮುಸಾಫ್ಫಾ ಚಾಂಪಿಯನ್ ಆದರೆ ರನ್ನರ್ ಅಪ್ ಗೆ ಕರ್ನಾಟಕ ವಾರಿಯರ್ಸ್ ತೃಪ್ತಿ ಪಟ್ಟುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಜನಾಬ್ ರಝಕ್ ಅಡ್ಯನಡ್ಕ, ಜನಾಬ್ ಅಸ್ಲಾಂ ಕಾಪು , ಜನಾಬ್ ಅಶ್ರಫ್ ಅಹ್ಮದ್ ಬೈಲೂರು ಹಾಗು ಬಶೀರ್ ಸಂಪ್ಯ ಭಾಗವಸಿದ್ದರು. ಅನಿವಾಸಿ ಕನ್ನಡಿಗರ ಒಕ್ಕೂಟ್ಟದ ಅಧ್ಯಕ್ಷರಾದ ಜನಾಬ್ ಶಾಫಿ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾದ ಜನಾಬ್ ರಝಕ್ ಅಡ್ಯನಡ್ಕ ಮಾತಾಡಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ನಿಮ್ಮನ್ನು ನೋಡಲು ಖುಷಿಯಾಗುತ್ತಿದೆ, ಇದೇ ರೀತಿ ಇನ್ನು ಹಲವು ಕ್ರೀಡಾಕೂಟವನ್ನು ಆಯೋಜಿಸಿ ಮತ್ತು ಎಂದಿಗೂ ನಮ್ಮ ಸಹಕಾರ ನಿಮಗಿದೆ ಎಂದರು ಮತ್ತು ನ್ಯಾಷನಲ್ ಡೇ ಕಪ್ ಜಯಗಳಿಸಿದ ಟೀಮ್ ಮುಸಾಫ್ಫಾ ಕ್ಯಾಪ್ಟನ್ ಮುಬಾರಕ್ ಫರಂಗಿಪೇಟೆ ಅವರಿಗೆ ಟ್ರೋಫಿ ವಿತರಿಸದರು.
ಅನಿವಾಸಿ ಕನ್ನಡಿಗರ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಜನಾಬ್ ಶರೀಫ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು ಮತ್ತು ಬಂದಂತಹ ಎಲ್ಲಾ ಕ್ರೀಡಾಭಿಮಾನಿಗಳಿಗೆ ಸ್ವಾಗತವನ್ನು ಕೋರಿದರು ಮತ್ತು ಅಂಪೈರ್ ಆಗಿ ಇಕ್ಬಾಲ್ ಆತೂರ್, ಬಷೀರ್ ಕೊಡ್ಲಿಪೇಟೆ, ಮುಸ್ತಫಾ ಸವಣೂರು, ಸಮದ್ ಸಂಟ್ಯಾರ್ ಸಹಕರಿಸಿದರು. ಕ್ರಿಕೆಟ್ ಟೂರ್ನಮೆಂಟ್ ನಿರ್ದೇಶಕರಾದ ಜನಾಬ್ ಯಾಹ್ಯಾ ಕೊಡ್ಲಿಪೇಟ್ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಿದರು.