Home Mangalorean News Kannada News ಅನಿವಾಸಿ ಭಾರತೀಯ ಕನ್ನಡಿಗರಿಗೆ ಕೇರಳ ಮಾದರಿಯ ಸಮಿತಿ ಹಾಗೂ ಭವನ ನಿರ್ಮಿಸುವಂತೆ ಸರಕಾರಕ್ಕೆ ವರದಿ ಮಂಡನೆ:...

ಅನಿವಾಸಿ ಭಾರತೀಯ ಕನ್ನಡಿಗರಿಗೆ ಕೇರಳ ಮಾದರಿಯ ಸಮಿತಿ ಹಾಗೂ ಭವನ ನಿರ್ಮಿಸುವಂತೆ ಸರಕಾರಕ್ಕೆ ವರದಿ ಮಂಡನೆ: ಲೋಬೊ

Spread the love

ಅನಿವಾಸಿ ಭಾರತೀಯ ಕನ್ನಡಿಗರಿಗೆ ಕೇರಳ ಮಾದರಿಯ ಸಮಿತಿ ಹಾಗೂ ಭವನ ನಿರ್ಮಿಸುವಂತೆ ಸರಕಾರಕ್ಕೆ ವರದಿ ಮಂಡನೆ: ಲೋಬೊ

ಮಂಗಳೂರು: ರಾಜ್ಯದ ಅನಿವಾಸಿ ಭಾರತೀಯ ಕನ್ನಡಿಗರ ಕಲ್ಯಾಣಕ್ಕಾಗಿ ಕೇರಳ ಮಾದರಿಯ ಸಮಿತಿ ರಚಿಸುವಂತೆ ರಾಜ್ಯ ವಿಧಾನಸಭೆಯಲ್ಲಿ ವರದಿ ಮಂಡಿಸಲಾಗಿದೆ ಎಂದು ಮಂಗಳೂರು ಶಾಸಕ ಜೆ ಆರ್ ಲೋಬೊ ಹೇಳಿದರು.

ತನ್ನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಕನ್ನಡಿಗರ ಕಲ್ಯಾಣದ ನಿಟ್ಟಿನಲ್ಲಿ ಕೇರಳ, ಗೋವಾ, ಆಂದ್ರಪ್ರದೇಶದಲ್ಲಿ ಸಮಿತಿ ಅಧ್ಯಯನ ನಡೆಸಿದ್ದು, ಅಂತಿಮವಾಗಿ ಕೇರಳ ಸರಕಾರವು ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಸಾಕಷ್ಟು ಯೋಜನೆಗಳು ಸಮಿತಿವೆ ತೃಪ್ತಿ ನೀಡಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ಸಮಿತಿಯು ವಿಧಾನ ಮಂಡಲದಲ್ಲಿ ತನ್ನ ವರದಿಯನ್ನು ಮಂಡನೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಬಜೆಟಿನಲ್ಲಿ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಅತ್ಯದಿಕ ಮಂದಿ ಅನಿವಾಸಿ ಭಾರತೀಯ ಕನ್ನಡಿಗರಾಗಿದ್ದು ಇದರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಕೆಳಹಂತದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಆದರೆ ಅವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವ ವ್ಯವಸ್ಥೆ ಇಲ್ಲಿ ಇಲ್ಲ ಈ ನಿಟ್ಟಿನಲ್ಲಿ ಕೇರಳ ಮಾದರಿಯ ಸಮಿತಿ ರಚಿಸುವ ಅನಿವಾರ್ಯ ಒದಗಿದೆ ಎಂದರು.

ಅನಿವಾಸಿ ಭಾರತೀಯ ಸಮಿತಿಯನ್ನು 2008 ರಲ್ಲಿ ರಚಿಸಲಾಗಿದ್ದು, ಈ ಸಮಿತಿಯು ಅನಿವಾಸಿ ಭಾರತೀಯ ಕನ್ನಡಿಗರ ಕಲ್ಯಾಣಕ್ಕಾಗಿ ನಿರ್ದಿಷ್ಠ ವ್ಯವಸ್ಥೆ ಮಾಡಿಲ್ಲ. ಕೇರಳದಲ್ಲಿ ಅಧ್ಯಯನ ಪ್ರವಾಸಕೈಗೊಂಡಾಗ ಅನೇಕ ರಚನಾತ್ಮಕ ಕೆಲಸಗಳು ಅಲ್ಲಿನ ಸಮಿತಿಯಿಂದ ಆಗಿರುವುದು ಸ್ಪಷ್ಟವಾಗಿದೆ. ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯದ ಶೇ51 ಮತ್ತು ಅನಿವಾಸಿ ಭಾರತೀಯ ಕನ್ನಡಿಗರ ಶೇ 49 ಹಣವನ್ನು ಒದಗಿಸಬೇಕಾಗಿದ್ದು, ವಿವಾಹ ಧೃಡೀಕರಣ ಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ಧೃಢೀಕರಣ, ವಿಸಾ ತಪಾಸಣೆ, ಇತ್ಯಾದಿ ಪಡೆಯಲು ರಾಜ್ಯದ ಪ್ರಮುಖ ನಗರಗಳಲ್ಲಿ ಕೇಂದ್ರಗಳನ್ನು ತೆರೆಯಬೇಕು. ಶೇರು ಬಂಡವಾಳ ಹೂಡಿಕೆಗೆ, ಪ್ರತ್ಯೇಕ ಸಂಸ್ಥೆ ರಚಿಸಬೇಕು. ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಧನಸಹಾಯ, ಆರೋಗ್ಯ ವಿಮಾ ಯೋಜನೆ, ಶಿಕ್ಷಣಕ್ಕೆ ಸಹಾಯ ಮಾಡಬೇಕು, ಗುರುತಿನ ಚೀಟಿ ನೀಡಬೇಕು ಎಲ್ಲ ಸಮಸ್ಯೆಗಳನ್ನು ಒಂದೆಡೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಅನಿವಾಸಿ ಭಾರತೀಯ ಕನ್ನಡಿಗ ಭವನ ತೆರೆಯಬೇಕು ಮತ್ತು ಸಮಿತಿ ರಚಿಸಿ ಪ್ರಾಥಮಿಕ ಹಂತದಲ್ಲಿ ರೂ 50 ಕೋಟಿ ರೂ ಮಂಜೂರು ಮಾಡಬೇಕು ಎಂದು ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ ತಿಳಿಸಲಾಗಿದೆ ಎಂದರು.


Spread the love

Exit mobile version