ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಗೆ `ಪ್ರೈಡ್ ಆಫ್ ಏಷ್ಯಾ ಇಂಟರ್‍ನ್ಯಾಷನಲ್ ಅವಾರ್ಡ್’

Spread the love

ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಗೆ `ಪ್ರೈಡ್ ಆಫ್ ಏಷ್ಯಾ ಇಂಟರ್‍ನ್ಯಾಷನಲ್ ಅವಾರ್ಡ್’

ಮನಾಮ, ಬಹ್ರೈನ್: ತನ್ನ ನಿರಂತರವಾದ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗೆ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಉಚ್ಛ ಸ್ತರದ ಪ್ರಶಸ್ತಿಗಳಿಗೆ ಭಾಜನರಾಗಿರುವ ಬಹ್ರೈನ್ ವಾಸ್ತವ್ಯದ ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರು ಇದೀಗ `ಅಂತಾರಾಷ್ಟ್ರೀಯ ಶಾಂತಿ ಮತ್ತು ಸಮಗ್ರತೆ’ಯ ಕ್ಷೇತ್ರಕ್ಕೆ ತಾನು ನೀಡಿರುವ ಅಮೂಲ್ಯ ಕೊಡುಗೆಗಳಿಗಾಗಿ ಥೈಲ್ಯಾಂಡಿನ ಬ್ಯಾಂಕಾಕ್‍ನಲ್ಲಿ ಜರಗಿದ `ಗ್ಲೋಬಲ್ ಅಚೀವರ್ಸ್ ಫೌಂಡೇಷನ್’ನ ಶೃಂಗಸಭೆಯಲ್ಲಿ ಪ್ರತಿಷ್ಠಿತ `ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ಯಿಂದ ಪುರಸ್ಕೃತರಾಗಿರುತ್ತಾರೆ.

ಥೈಲ್ಯಾಂಡಿನ ಬ್ಯಾಂಕಾಕ್ ಮಹಾನಗರದ ಹಾಲಿಡೇ ಇನ್ನ್ ಸಿಲೋಮ್ ಪಂಚತಾರಾ ಹೊಟೇಲಿನಲ್ಲಿ ಇತ್ತೀಚೆಗೆ ಜರಗಿದ ಅತಿ ಅದ್ದೂರಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಥೈಲ್ಯಾಂಡಿನ ಮಾಜಿ ಉಪ ಪ್ರಧಾನಿ ಕೋರ್ನ್ ಡೆಬೆರಾನ್ಸಿ ಹಾಗೂ ಫ್ರಾನ್ಸಿನ ರಾಜಕುಮಾರಿ ಇಸಾಬೆಲ್ ಲಫೆÇೀರ್ಗ್ ಇವರು ಜಂಟಿಯಾಗಿ ಈ ಪ್ರಶಸ್ತಿಯನ್ನು ಲೀಲಾಧರ್ ಬೈಕಂಪಾಡಿಯವರಿಗೆ ಪ್ರದಾನಿಸಿದ್ದು, ಈ ಸಂದರ್ಭದಲ್ಲಿ ಡಾ. ಸಂಜಯ್ ಕುಮಾರ್ [ಪ್ರತಿನಿಧಿ, ಭಾರತೀಯ ರಾಯಭಾರಿ ಕಚೇರಿ – ಬ್ಯಾಂಕಾಕ್], ನಮಿತಾ ಪರಿತೋಷ್ ಕೊಹೊಕ್ [ಅಮೇರಿಕಾದ ಗ್ಲೋಬಲ್ ಯುನೈಟೆಡ್ ಪೇಜಂಟ್ ಸೌಂದರ್ಯ ಸ್ಪರ್ಧಾ ವಿಜೇತೆ], ರಮೇಶ್‍ಚಂದ್ರ ರತನ್ [ಹಿರಿಯ ರಾಷ್ಟ್ರೀಯ ನೇತಾರ, ಭಾಜಪ – ಭಾರತ] ಮತ್ತು ಡಾ. ಕಮಲ್‍ಜಿತ್ ಸಿಂಗ್ [ಪ್ರತಿನಿಧಿ, ಗ್ಲೋಬಲ್ ಅಚೀವರ್ಸ್ ಫೌಂಡೇಷನ್ – ಬ್ಯಾಂಕಾಕ್] ಮುಂತಾದ ಗಣ್ಯರೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗತ ಎರಡು ದಶಕಗಳಿಂದ ಉದ್ಯೋಗ ನಿಮಿತ್ತ ಬಹ್ರೈನ್ ನಿವಾಸಿಯಾಗಿರುವ ಲೀಲಾಧರ್ ಬೈಕಂಪಾಡಿಯವರು ತನ್ನ ಜೀವನದಲ್ಲಿ ಒಟ್ಟು ಮೂರು ದಶಕಗಳಿಂದ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಯುವ ಸಂಘಟನೆಯ ಕೈಂಕರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ದೇಶ – ವಿದೇಶದಲ್ಲಿ ತನ್ನ ವೈಯಕ್ತಿಕ ನೆಲೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ಮೂಲಕ ತಾನು ಸಲ್ಲಿಸುವ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗೆ ಖ್ಯಾತನಾಮರಾಗಿರುವ ಇವರು ನಾಡಿನ ಮತ್ತು ಹೊರನಾಡಿನ ಅನೇಕ ಸಂಘ – ಸಂಸ್ಥೆಗಳಲ್ಲಿ ಪ್ರತ್ಯಕ್ಷ ಯಾ ಪರೋಕ್ಷವಾಗಿ ಸದಾ ಸಕ್ರಿಯರಾಗಿದ್ದಾರೆ. ವೃತ್ತಿಯಲ್ಲಿ ವಿತ್ತ ಅಧಿಕಾರಿಯಾಗಿರುವ ಇವರು ಪ್ರವೃತ್ತಿಯಲ್ಲಿ ಪ್ರಗತಿಪರ ವಿಚಾರಧಾರೆಯ, ಸಮಾಜಮುಖಿ ಚಿಂತನೆಯ ಸಮಾಜ ಸೇವಕರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಓರ್ವ ಚತುರ ಸಂಘಟಕನಾಗಿ ಗುರುತಿಸಿಕೊಳ್ಳುತ್ತಾ, ತನ್ನ ವೈವಿಧ್ಯಮಯ ಸೇವೆ – ಸಾಧನೆಗಳ ಮೂಲಕ ಇವರು ಎಲ್ಲೆಡೆಯಲ್ಲೂ ಗೌರವ ಮತ್ತು ಪುರಸ್ಕಾರಗಳಿಗೆ ಪಾತ್ರರಾಗುತ್ತಲೇ ಬಂದಿರುತ್ತಾರೆ.

ಸಂಸ್ಕೃತಿ ಮತ್ತು ಸಾಹಿತ್ಯದ ಕಾಯಕಗಳಲ್ಲೂ ಅದಮ್ಯ ಆಸಕ್ತಿಯನ್ನು ವಹಿಸುವ ಇವರು, ನಾಡು – ನುಡಿಯ ಬಗ್ಗೆ ವಿಶೇಷವಾದ ಆಭಿರುಚಿಯನ್ನು ಹೊಂದಿರುತ್ತಾರೆ. ಸೇವೆ, ಸಹಕಾರ ಮತ್ತು ಸಂಘಟನಾ ತತ್ವವುಳ್ಳ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಇವರು, ದೇಶ – ವಿದೇಶದಲ್ಲಿ ಕೆಲವೊಂದು ಸಾಮುದಾಯಿಕ ಹಾಗೂ ಸಾಮಾಜಿಕ ಸಂಘಟನೆಗಳ ಸಂಸ್ಥಾಪಕರೂ ಹೌದು. ಜನಮುಖಿ ಕಾರ್ಯಚಟುವಟಿಕೆಗಳಿಗಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುವ ಇವರು, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವತ್ತೂ ಧ್ವನಿಯೆತ್ತುವ ನೇರ ನಡೆ – ನುಡಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಾಧನೆಯ ಹಾದಿಯಲ್ಲಿ ಸದಾ ಸಾಧಿಸುತ್ತಲೇ ಸಾಗುತ್ತಿರುವ ಕರಾವಳಿ ಮೂಲದ ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರಿಗೆ ಇದೀಗ ಪ್ರದಾನವಾಗಿರುವ ಪ್ರತಿಷ್ಠಿತ `ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ಯು ಅವರ ಒಟ್ಟು ಸೇವೆ, ಸಾಧನೆ ಮತ್ತು ಯೋಗ್ಯತೆಗೆ ಸಂದ ಸ್ಪಷ್ಟ ಗೌರವವಾಗಿದ್ದು, ಈ ಸಂದರ್ಭದಲ್ಲಿ ಸಮಸ್ತ ತುಳು – ಕನ್ನಡಿಗರ ಸಮುದಾಯವು ಅವರನ್ನು ಅಭಿಮಾನಪೂರ್ವಕವಾಗಿ ಅಭಿವಂದಿಸಿ ಅಭಿನಂದಿಸುತ್ತದೆ.


Spread the love