ಅನಿಸಿಕೆಗಳು ಇದ್ದಾಗಲೇ ಕಥೆ ಮೂಡಲು ಸಾಧ್ಯ: ಪ್ರಸಾದ್ ಶೆಣೈ
ಉಜಿರೆ: “ನಮ್ಮ ದೈನಂದಿನ ದಿನಚರಿಗಳು ಘಟನೆಗಳು, ಪ್ರಸಂಗಗಳು, ಅನುಭವಗಳು ಕಥೆ ಬರೆಯಲು ಮುಖ್ಯ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಭಾವನೆಗಳಿಗೆ ಬೆಲೆ ಕೊಡಬೇಕು. ಅನಿಸಿಕೆಗಳು ಇದ್ದಾಗಲೇ ಕಥೆ ಮೂಡಲು ಸಾಧ್ಯ” ಎಂದು ಖ್ಯಾತ ಕಥೆಗಾರ ಹಾಗೂ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸಾದ್ ಶೆಣೈ ಹೇಳಿದರು.
ಅವರು ಜುಲೈ 31 ರಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ‘ಕಥಾರಚನಾ ಕಮ್ಮಟ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಇನ್ನೊಬ್ಬರ ಬದುಕಿನ ಅನಿವಾರ್ಯತೆ ತಿಳಿದಾಗ ಕಥೆ ಮೂಡಲು ಸಾಧ್ಯ. ಕಥೆಗಾರರಲ್ಲಿ ಯೋಚನೆ ಹಾಗೂ ಕಲ್ಪನಾ ಶಕ್ತಿ ಮುಖ್ಯ. ಕಥೆಗಾರರಲ್ಲಿ ಪ್ರಶ್ನೆಗಳು ಮೂಡಬೇಕು. ಆಕಾಶದಲ್ಲಿ ಕ್ಷಣಕ್ಕೊಮ್ಮೆ ಚದುರುವ ಮೋಡ ಇದ್ದ ಹಾಗೆ ಬದುಕಿನಲ್ಲಿಯೂ ಬದಲಾವಣೆ ಆಗುತ್ತಲೆ ಇರುತ್ತದೆ ಎಂದರು.
ಮಾತು ಮುಂದುವರೆಸಿ, ಪುಟ್ಟ ಮಗುವಿನಂತಹ ಭಾವನೆಗಳು ಮಾತ್ರ ಕಥೆ ಬರೆಯಲು ಪ್ರೇರಣೆ ನೀಡುತ್ತವೆ. ಕಲ್ಪನೆಗಳು ಯಾವಾಗಲು ನಿಜವಾಗುವುದಿಲ್ಲ. ವಾಸ್ತವ ವಿಷಯಗಳನ್ನು ಕಲ್ಪನೆಯಲ್ಲಿ ಬರೆದರೆ ಕಥೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್, ಕಥೆ ಭಾವನೆಗಳನ್ನು ಹೊರಹಾಕುವ ಕಲೆ. ನಮ್ಮ ಬರವಣಿಗೆ ನಮಗೆ ಖುಷಿ ತರಬೇಕು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ಹೊರತರಲು ಕಥೆ ಅತ್ಯುತ್ತಮ ಅಡಿಪಾಯ ಎಂದು ಅಭಿಪ್ರಾಯಪಟ್ಟರು.
ಕಮ್ಮಟದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಕಾರ್ಯಕ್ರಮವನ್ನು ಸಂಯೋಜಕ ಹಾಗೂ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ನಿರೂಪಿಸಿ, ಪ್ರಾಧ್ಯಾಪಕ ಡಾ. ರಾಜಶೇಖರ್ ಅತಿಥಿ ಪರಿಚಯ ಮಾಡಿ, ವಿದ್ಯಾರ್ಥಿನಿ ವಿನುತಾ ವಂದಿಸಿದರು.
ವರದಿ: ಶ್ವೇತಾ ಎಂ, ಪತ್ರಿಕೋಧ್ಯಮ ವಿಭಾಗ, ಎಸ್ ಡಿ ಎಂ ಕಾಲೇಜು, ಉಜಿರೆ.