ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಸಂಬಳ ನೀಡಲು ಕ್ಯಾ. ಕಾರ್ಣಿಕ್ ಮನವಿ
ಮಂಗಳೂರು: ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಸಂಬಳ ನೀಡಲು ಆದೇಶ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮಾಜಿ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ. .
ಕೋವಿಡ್ 19 (ಕೊರೊನಾ) ಮಹಾ ಮಾರಿಯಿಂದ ಜಗತ್ತು ತತ್ತರಿಸಿ ಹೋಗಿದೆ. ಈ ರೋಗವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸರಕಾರಗಳು ಲಾಕ್ ಡೌನ್, ಜನರಲ್ಲಿ ಜನ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಲು ಸಮರೋಪಾದಿಯ ಕೆಲಸಗಳನ್ನು ಮಾಡುತ್ತಿದೆ.
ಲಾಕ್ ಡೌನ್ ಜಾರಿಯಾದ ಬಳಿಕ ಉಂಟಾದ ಉದ್ಯೋಗ ಅಭದ್ರತೆ ಇದೀಗಾ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಸರಿ ಸುಮಾರು 3 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾರೆ. ಈ ಸಿಬ್ಬಂದಿಗಳಿಗೆ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಲಾಕ್ ಡೌನ್ ಬಳಿಕ ಸಂಬಳ ನೀಡದಿರುವ ಬಗ್ಗೆ ಅಳಲನ್ನು ವ್ಯಕ್ತಪಡಿಸಿದ್ದು ಸಂಬಳ ದೊರಕದೆ ಇವರ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಈ ರೀತಿ ಮುಂದುವರಿದಲ್ಲಿ ಇವರ ಜೀವನ ಇನ್ನಷ್ಟು ಶೋಚನಿಯವಾಗಬಹುದು.
ಗೌರವಯುತವಾಗಿ ಜೀವನ ನಡೆಸಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಶೀಘ್ರವಾಗಿ ಸಂಬಳ ನೀಡುವ ಕುರಿತು ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲಾ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಆದೇಶ ನೀಡುವಂತೆ ಅವರು ಮನವಿಯಲ್ಲಿ ವಿನಂತಿಸಿದ್ದಾರೆ.