ಅನುದಾನ ವಾಪಾಸ್:- ಕೆ.ಆರ್.ಐ.ಡಿ.ಎಲ್. ಗೆ ಸಚಿವರ ಎಚ್ಚರಿಕೆ
ಮ0ಗಳೂರು : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ (ಕೆ.ಆರ್.ಐ.ಡಿ.ಎಲ್)ಗೆ ವಹಿಸಲಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ತಿಗೊಳಿಸದೆ ವಿಳಂಭ ಧೋರಣೆ ಮುಂದುವರಿಸಿದರೆ ನೀಡಲಾಗಿರುವ ಎಲ್ಲಾ ಕಾಮಗಾರಿ ಮತ್ತು ಅನುದಾನ ವಾಪಾಸ್ ತೆಗೆದುಕೊಳ್ಳುವುದಾಗಿ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಎಚ್ಚರಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಶಾಸಕರ ಪ್ರದೇಶಾಭಿವೃದ್ಧಿ ನಿದಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಕೆ.ಆರ್.ಐ.ಡಿ.ಎಲ್ (ಲ್ಯಾಂಡ್‍ಆರ್ಮಿ) ಯ ಕಾರ್ಯವೈಖರಿ ಬಗ್ಗೆ ಶಸಕರು ಸೇರಿದಂತೆ ಜನಪ್ರತಿನಿಧಿಗಳಿಂದ ತೀವ್ರ ಅಸಮಾಧಾನ ಬರುತ್ತಿವೆ. ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬದಿಂದ ಅನುದಾನಗಳು ನಿಷ್ಟ್ರಯೋಜಕವಾಗುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಲೋಕೋಪಯೋಗಿ ಅಥವಾ ಜಿಲ್ಲಾಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಮೂಲಕವೇ ಅನುಷ್ಠಾನಗೊಳಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ಹಳೆ ಕಾಮಗಾರಿಗಳನ್ನು ಸೆಪ್ಟಂಬರ್ 01 ರೊಳಗೆ ಪೂರ್ಣಗೊಳಿಸುವಂತೆ ಸಚಿವರು ತಾಕೀತು ಮಾಡಿದರು. ಶಾಸಕ ಬಿ.ಎ. ಮೊಹಿದೀನ್ ಬಾವಾ ಮಾತನಾಡಿ, ಉತ್ತರ ಕ್ಷೇತ್ರ ವ್ಯಾಪ್ತಿಯ ಮುತ್ತೂರು ಸರಕಾರಿ ಕಾಲೇಜಿಗೆ ಶೌಚಾಲಯ ನಿರ್ಮಿಸಲು ರೂ. 50 ಲಕ್ಷ ಅನುದಾನವನ್ನು ಕೆ.ಆರ್.ಐ.ಡಿ.ಎಲ್. ಗೆ ನೀಡಲಾಗಿದೆ. ಆದರೆ ಕಾಮಗಾರಿ ಪ್ರಾರಂಭಿಸಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಸಚಿವರ ಗಮನ ಸೆಳೆದರು.
ಶಾಸಕ ಜೆ.ಆರ್.ಲೋಬೋ ಮಾತನಾಡಿ, ನಗರದ ಪುರಭವನ ಸಮೀಪ ಸ್ಕೈವಾಕ್ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಲು ಒತ್ತಾಯಿಸಿದರು. ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಡಾ: ಕೆ.ಜಿ. ಜಗದೀಶ್ ಮತ್ತಿತರರು ಇದ್ದರು.