ಅಪಘಾತದಲ್ಲಿ ಗಾಯಗೊಂಡಿದ್ದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಜ್ಯೋತಿ ಶೆಟ್ಟಿ ಮೃತ್ಯು
ಉಡುಪಿ: ಅಂಬಾಗಿಲು ಬಳಿ ಜೂ.9ರಂದು ಸಂಜೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಜ್ಯೋತಿ ಶೆಟ್ಟಿ ಕೊಡವೂರು (50) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟರು.
ಅವರು ತನ್ನ ಸಹೋದರ ಶ್ರೀನಿವಾಸ ಶೆಟ್ಟಿ ಎಂಬವರ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಉಡುಪಿಯಿಂದ ಮನೆಗೆ ಹೋಗುತ್ತಿದ್ದರು. ಈ ವೇಳೆ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಜ್ಯೋತಿ ಶೆಟ್ಟಿ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡರು. ಮಣಿಪಾಲ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಅವರು ರವಿವಾರ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಕೊಡವೂರು ನಿವಾಸಿಯಾಗಿರುವ ಜ್ಯೋತಿ ಶೆಟ್ಟಿ 2011ರಲ್ಲಿ ಮಾಸ್ಟರ್ (ಹಿರಿಯರ) ಅಥ್ಲೆಟಿಕ್ಸ್‌ಗೆ ಕಾಲಿರಿಸಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ 100ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದರು.
2017ರಲ್ಲಿ ಚೀನಾದಲ್ಲಿ ನಡೆದ ಏಷ್ಯಾನ್ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಹರ್ಡಲ್ಸ್ ಹಾಗೂ ರಿಲೇಯಲ್ಲಿ ಎರಡು ಪದಕಗಳನ್ನು ಗೆದ್ದಿದ್ದರು. 2016ರಲ್ಲಿ ಆಸ್ಟ್ರೇಲಿಯ ದಲ್ಲಿ ನಡೆದ ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಅವರು ಉತ್ತಮ ಸಾಧನೆ ಮಾಡಿದ್ದರು. ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಪದಕ ವಿಜೇತರಾಗಿದ್ದರು.
ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ನಡೆದ ಹಲವು ಮ್ಯಾರಥಾನ್‌ನಲ್ಲಿಯೂ ಪ್ರಶಸ್ತಿ ಪಡೆದುಕೊಂಡಿದ್ದರು. ಅವರು ಮುಂದಿನ ಸೆಪ್ಟಂಬರ್ ನಲ್ಲಿ ಸ್ಪೇನ್ ದೇಶದಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿದ್ದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಉಡುಪಿಯ ಖಾಸಗಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿಯಾಗಿ ಕರ್ತವ್ಯ ನಿರ್ಹಸಿದ್ದರು. ಮೃತರು ಪತಿ ಉದಯ ಕುಮಾರ್ ಶೆಟ್ಟಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.