ಅಪಘಾತ ನಡೆಸಿ ಯುವತಿಯೊಂದಿಗೆ ಅಸಭ್ಯ ವರ್ತನೆ; ಆರೋಪಿ ಪಿಕಪ್ ಚಾಲಕನ ಸೆರೆ
ಬೆಳ್ತಂಗಡಿ: ನೆರಿಯದಲ್ಲಿ ಪಿಕಪ್ ಚಾಲಕನೋರ್ವ ಪಿಕಪ್ನ್ನು ರಿಕ್ಷವೊಂದಕ್ಕೆ ಢಿಕ್ಕಿ ಹೊಡೆಸಿ ಅದರಲ್ಲಿದ್ದ ಯುವತಿಯರನ್ನು ಎಳೆದಾಡಿ ದೌರ್ಜನ್ಯ ನಡೆಸಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ, ಸ್ಥಳೀಯ ನಿವಾಸಿ ಥೋಮಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಥೋಮಸ್ ಇಂದು ಸಂಜೆ ಪಾನಮತ್ತನಾಗಿ ತನ್ನ ಪಿಕಪ್ ವಾಹನವನ್ನು ಚಲಾಯಿಸಿಕೊಂಡು ಅಣಿಯೂರು ಸಮೀಪ ರಿಕ್ಷಾಗೆ ಢಿಕ್ಕಿ ಹೊಡೆಸಿದನೆನ್ನಲಾಗಿದೆ. ಇದರಿಂದ ರಿಕ್ಷಾ ಚಾಲಕ ಸತೀಶ್ ಎಂಬವರು ಗಾಯಗೊಂಡಿದ್ದರು. ಅಲ್ಲದೆ ರಿಕ್ಷಾದಲ್ಲಿದ್ದ ದಲಿತ ಯುವತಿಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳುಗಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಬಂಟ್ವಾಳ ಎಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಮಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಆರೋಪಿ ಥಾಮಸ್ ನು ಈ ಹಿಂದೆಯು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನನ್ನು ಮುಂದಿನ ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಹಾಗೂ ಈತನನ್ನು ಗಡಿಪಾರು ಮಾಡಲು ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.