ಉಡುಪಿ: ಜಿಲ್ಲೆಯಲ್ಲಿ ಪ್ರತಿದಿನ ಒಂದಲ್ಲ ಒಂದು ಅಹಿತಕರ ಪ್ರಕರಣಗಳು ಸಂಭವಿಸುತ್ತಿದ್ದು, ಇದನ್ನು ನಿಯಂತ್ರಿಸಲು ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಇರದೆ ಹೋದರೂ ಒರ್ವ ಸಾಮಾನ್ಯ ನಾಗರಿಕನಾಗಿ ಪೋಲಿಸರಿಗೆ ಪ್ರಕರಣದ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ನೀಡುವ ವಿಶೇಷ ಸಾಧನೆ ಸುರಕ್ಷಾ ಪೋಲಿಸ್ ಉಡುಪಿ ಎನ್ನುವ ಮೊಬೈಲ್ ಆ್ಯಪ್.
ಉಡುಪಿಯಲ್ಲಿ ತರಬೇತಿಯನ್ನು ಮುಗಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ವರ್ಷದೊಳಗೆ ದಕ್ಷ ಪೋಲಿಸ್ ಅಧಿಕಾರಿ ಎಂಬ ಹೆಸರನ್ನು ಪಡೆದಿರುವ ಉಡುಪಿ ಜಿಲ್ಲಾ ಎಸ್ ಪಿ ಅಣ್ಣಾಮಲೈ ಅವರ ಕನಸಿನ ಕೂಸೇ ಈ ಸುರಕ್ಷಾ ಆ್ಯಪ್. ಪೋಲಿಸ್ ಇಲಾಖೆಯಲ್ಲಿ ಹೊಸ ಸಂಚಲನ ಮೂಡಿಸಲು ಕಾರಣವಾದ ಈ ಸುರಕ್ಷಾ ಆ್ಯಪನ್ನು ಈಗಾಗಲೇ ಉಡುಪಿ ಜಿಲ್ಲೆಯ 10,000 ಕ್ಕೂ ಅಧಿಕ ಮಂದಿ ತಮ್ಮ ಮೊಬೈಲಿಗೆ ಡೌನ್ಲೋಡ್ ಮಾಡಿಕೊಂಡು ಪೋಲಿಸ್ ಇಲಾಖೆಯ ಪರೋಕ್ಷ ಮಾಹಿತಿದಾರರಾಗಿ ನೆರವಾಗುತ್ತಿದ್ದಾರೆ.
ಎಸ್ ಪಿ ಅಣ್ಣಾಮಲೈ ಅವರ ವಿಶೇಷ ಆಸಕ್ತಿಯಿಂದಾಗಿ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಗಾಗಿಯೇ ನಿರ್ಮಾಣಗೊಂಡಿದರುವ ಈ ಆ್ಯಪನ್ನು ಉಚಿತವಾಗಿ ಆ್ಯಂಡ್ರಾಯ್ಡ್ – ಐಓಎಸ್ ಎರಡೂ ಮೊಬೈಲುಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಆ್ಯಪ್ ನಲ್ಲಿ ಬಳಕೆದಾರರು ತಮ್ಮ ಮೋಬೈಲ್ ನಂಬರ್ ಮತ್ತು ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಇದನ್ನು ಪೋಲಿಸ್ ಇಲಾಖೆ ಗೌಪ್ಯವಾಗಿಡುತ್ತದೆ. ನಂತರ ಈ ಅ್ಯಪ್ ಮೂಲಕ ಸುತ್ತಮುತ್ತ ನಡೆಯುವ ಯಾವುದೇ ಅಹಿತಕರ ಘಟನೆ ಬಗ್ಗೆ ಪೋಲಿಸ್ ಇಲಾಖೆಗೆ ನೇರವಾಗಿ ಮಾಹಿತಿ, ಫೋಟೊ, ವೀಡಿಯೋಗಳನ್ನು ಅಪ್ ಲೋಡ್ ಮಾಡಲು ಅವಕಾಶವಿದೆ. ಈ ಮಾಹಿತಿ ಜಿಲ್ಲಾ ಪೋಲಿಸ್ ಕೇಂದ್ರ ಕಚೇರಿಗೆ, ಅಲ್ಲಿಂದ ಸಂಬಂಧಪಟ್ಟ ಘಟನೆಗೆ ಸಂಬಂಧಿಸಿದ ಠಾಣೆಗೆ ರವಾನೆಯಾಗಿ ಕೆಲವೇ ನಿಮಿಷಗಳಲ್ಲಿ ಪೋಲಿಸರು ಸ್ಥಳಕ್ಕೆ ತೆರಳಿ ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ. ಈಗಾಗಲೇ ಇದರಲ್ಲಿ ಸುಮಾರು 700ರಷ್ಟು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಮಟ್ಕಾ ಆಡುವಂತಹ ದೂರುಗಳು, ಕಳ್ಳತನ, ದರೋಡೆ, ನಡು ರಸ್ತೆಯಲ್ಲಿ ಹೊಡೆದಾಡುವ, ಸಾರ್ವಜನಿಕವಾಗಿ ಆಶ್ಲೀಲವಾಗಿ ವರ್ತಿಸುವ, ಮದ್ಯಪಾನ ಮಾಡುವ, ಸಿಗರೇಟು ಸೇದುವ ಮಾತ್ರವಲ್ಲದೆ ಕೊಲೆಯಂಥ ದೂರುಗಳ ಸಹ ದಾಖಲಾಗಿವೆ. ಕಳೆದ 2015 ಎಪ್ರಿಲ್ 27ರಂದು ಬಿಡುಗಡೆಯಾದ ಆ್ಯಪ್ ನಲ್ಲಿ ದಾಖಲಾದ ದೂರುಗಳಿಗೆ ಸರಿಯಾದ ಪರಿಹಾರ ನೀಡುವಲ್ಲಿ ಪೋಲಿಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ. ಈಗಾಗಲೇ 10000 ಮಂದಿ ಅ್ಯಪ್ ಮೂಲಕ ನಮ್ಮ ಮಾಹಿತಿದಾರರಾಗಿದ್ದು, ಕಳೆದ 300 ದಿನಗಳಲ್ಲಿ ಸುಮಾರು 700 ದೂರುಗಳು ದಾಖಲಾಗಿದ್ದು ಅವುಗಳನ್ನು ಬಗೆಹರಿಸಲಾಗಿದೆ ಅಲ್ಲದೆ ಇದರಿಂದ ಪೋಲಿಸ್ ಮತ್ತು ಜನರ ನಡುವೆ ಇದ್ದ ಅಂತರ ಕಡಿಮೆಯಾಗಲು ಸಾಧ್ಯವಾಗಿದೆ ಎನ್ನುತ್ತಾರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ.
ನಿಜವಾದ ದೂರಗಳನ್ನು ಆ್ಯಪ್ ನಲ್ಲಿ ದಾಖಲಿಸಿದೆ ಕೇವಲ ತಮಾಷೆಗೆ ಮೋಜಿಗೆ ಸುಳ್ಳೂ ದೂರು ನೀಡುವುದಕ್ಕೆ ಒಂದು ವೇಳೆ ಆ್ಯಪನ್ನು ದುರ್ಬಳಕೆ ಮಾಡಿಕೊಂಡರೂ ಸಹ ಪೋಲಿಸರು ದುರ್ಬಳಕೆ ಮಾಡಿಕೊಂಡವರ ಮೇಲೆ ಸಹ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಅ್ಯಪನ್ನು ಡೌನ್ ಲೋಡ್ ಮಾಡಿಕೊಂಡು ಅ್ಯಕ್ಟಿವೇಶನ್ ಮಾಡಿಕೊಳ್ಳುವಾಗ ಹೆಸರು ಮತ್ತು ಮೊಬೈಲ್ ನಂಬರ್ ದಾಖಲಾಗುತ್ತದೆ ಇದರ ಮೇಲೆ ಸುಳ್ಳು ದೂರು ನೀಡಿದವರ ಮೇಲೆ ಕ್ರಮ ಕೈಗೊಳ್ಳು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ ಒಂದಲ್ಲ ಒಂದು ರೀತಿಯ ಹೊಸತನದೊಂದಿಗೆ ರಾಜ್ಯದಲ್ಲಿ ಸುದ್ದಿಯಾದ ದಕ್ಷ ಅಧಿಕಾರಿ ಅಣ್ಣಾಮಲೈ ಅವರು ಅ್ಯಪ್ ನಿರ್ಮಾಣದಿಂದ ರಾಜ್ಯದ ಇತರ ಜಿಲ್ಲೆಗಳ ಪೋಲಿಸರಿಗೂ ಮಾದರಿಯಾಗಿದ್ದಾರೆ.