ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ

Spread the love

ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ

ಮೂಡುಬಿದಿರೆ: `ಬಹುತ್ವದ ಪರಿಕಲ್ಪನೆ ಯಾವಾಗಲೂ ನನ್ನ ಆಸಕ್ತಿಯ ವಿಷಯ. ನಮ್ಮ ದೊಡ್ಡ ಜೀವನ ಬಹುತ್ವದ ನೆಲೆಯಲ್ಲಿ ಬರಬೇಕು ಎಂಬ ಆಸೆ ಇಟ್ಟುಕೊಂಡವನು ನಾನು. ಜೀವನದ ಅವಿಭಾಜ್ಯ ಅಂಗವಾಗಿ ಈ ವೈವಿಧ್ಯತೆ ಯಾವಾಗಲೂ ಇರಬೇಕು. ಅದಕ್ಕಾಗಿಯೇ ಈ ಬಾರಿಯ ನುಡಿಸಿರಿಯನ್ನು ಬಹುತ್ವದ ಪರಿಕಲ್ಪನೆಯಲ್ಲಿ ಮಾಡುತ್ತಿದ್ದೇವೆ’ ಎಂದು ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ನುಡಿಸಿರಿಯ ಮೂರನೇ ದಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಭಿಕರ ಹಲವಾರು ಪ್ರಶ್ನೆಗಳಿಗೆ ಮನಬಿಚ್ಚಿ ಉತ್ತರಿಸಿದ ಡಾ. ಆಳ್ವ ತಮ್ಮ ಆಲೋಚನೆ, ವಿಚಾರಗಳನ್ನು ಜನರ ಜೊತೆ ಹಂಚಿಕೊಂಡರು.

ಬದುಕಿನಲ್ಲಿ ಎದುರಾಗುವ ಆರೋಪಗಳು ಹಾಗೂ ಅಪಸ್ವರಗಳನ್ನು ಹೇಗೆ ಎದುರಿಸಿದ್ದೀರಿ ಎಂಬ ಪ್ರಶ್ನೆಗೆ, ಅಪಸ್ವರ ಬಂದಾಗಲೇ ಸ್ವರದ ಮಹತ್ವ ಗೊತ್ತಾಗುತ್ತದೆ. ಈ ರೀತಿ ಅಪವಾದಗಳು ಬಂದಾಗ ಅದರ ಕುರಿತು ಏಕಾಂತದಲ್ಲಿ ಆಲೋಚಿಸಬೇಕು; ಏಕೆಂದರೆ ಸತ್ಯ ಏನು ಎಂಬುದು ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುತ್ತದೆ. ಈ ಜಬತ್ತಿನಲ್ಲಿ ಎಂತೆಂತಹವರಿಗೋ ಅಪವಾದಗಳು ಬಂದಿವೆ, ಅಂಥದ್ದರಲ್ಲಿ ನನ್ನ ಮೇಲೆ ಆರೋಪಗಳು ಬಂದಿದ್ದು ದೊಡ್ಡದೇನಲ್ಲ ಎಂದರು. ಜೊತೆಗೆ ಹೊಸ ಪರಿಕಲ್ಪನೆಗಳ ಬಗ್ಗೆ ಮಾತನಾಡಿದ ಅವರು `ಮನುಷ್ಯನ ಜೀವನ ಯಾವಾಗಲು ಹರಿಯುವ ನೀರಿನಂತಿರಬೇಕು; ಇಲ್ಲದಿದ್ದಲ್ಲಿ ನಾವು ಚಲಾವಣೆಯಿಲ್ಲದ ನಾಣ್ಯಗಳಾಗಿಬಿಡುತ್ತೇವೆ. ಯಾವ ಸಮಯದಲ್ಲಿ ಎಂತಹ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದನ್ನು ಕಾಲವೇ ತಿಳಿಸಿಕೊಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸರಕಾರದಿಂದ ಏನಾದರೂ ಸಹಾಯ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಡಾ.ಎಂ.ಮೋಹನ್ ಆಳ್ವ, ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಸೂಕ್ಷ್ಮತೆ ಸರಕಾರಕ್ಕಿರಬೇಕು; ಕಳಾವಿದರನ್ನು, ಸಾಧಕರನ್ನು ಗುರುತಿಸಿ ಸರಕಾರವೇ ಪ್ರಶಸ್ತಿ ನೀಡಬೇಕು. ಡಾ.ವಿ.ಎಸ್.ಆಚಾರ್ಯರಿದ್ದಾಗ ಅವರ ಸಹಕಾರದಿಂದ ಸುಮಾರು 25 ಲಕ್ಷ ಆಗ ಬಂದಿತ್ತು. ಮೊತ್ತ ಈಗ 10 ಲಕ್ಷಕ್ಕಿಳಿದಿದೆ. ಸರಕಾರ ಸಹಾಯ ನೀಡಿದರೆ ಖಂಡಿತವಾಗಿ ಪ್ರಾಮಾಣಿಕ ಮನಸ್ಸಿನಿಂದ ಸ್ವೀಕರಿಸಿ ಅದನ್ನು ನುಡಿಸಿರಿಗಾಗಿ ಬಳಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಸರಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ನನ್ನ ಕೊರಳು ಒಡ್ಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. `ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರ ಬಗ್ಗೆ ಖಂಡಿತವಾಗಿಯೂ ನನಗೆ ಗೌರವವಿದೆ. ಆದರೆ ಅವರ ತತ್ವಗಳನ್ನು, ವಾದಗಳನ್ನು ನಾನು ಎಲ್ಲಾ ಸಮಯಗಳಲ್ಲಿ ಒಪ್ಪುವುದಿಲ್ಲ. ಅದಕ್ಕಾಗಿ ನುಡಿಸಿರಿಯ ಸಂದರ್ಭದಲ್ಲಿ ಅವರನ್ನು ಸ್ವಲ್ಪದೂರ ಇಡುತ್ತೇವೆ’ ಎಂಬ ಮಾತನ್ನು ಅವರು ಸೇರಿಸಿದರು.

ವಿದೇಶದಲ್ಲಿ ನುಡಿಸಿರಿ ಮಾಡುವ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮದು 300 ಜನ ವಿದ್ಯಾರ್ಥಿ ಕಲಾವಿದರ ಬಹುದೊಡ್ಡ ಸಾಂಸ್ಕøತಿಕ ತಂಡ. ಇಷ್ಟು ದೊಡ್ಡ ತಂಡವನ್ನು ವಿದೇಶಕ್ಕಾಗಲಿ ಅಥವಾ ಬೇರೆ ರಾಜ್ಯಗಳಿಗಾಗಲಿ ತೆಗೆದುಕೊಂಡು ಹೋಗಿ ನುಡಿಸಿರಿ-ವಿರಾಸತ್ ಮಾಡುವುದು ತ್ರಾಸದಾಯಕ ಕೆಲಸ. ಆದ್ದರಿಂದ ನುಡಿಸಿರಿ-ವಿರಾಸತ್‍ನ್ನು ಮೂಡುಬಿದಿರೆಯಲ್ಲಿಯೇ ಮಾಡುತ್ತೇವೆ ಆದರೆ ನುಡಿಸಿರಿ ಘಟಕಗಳನ್ನು ಮಾಡಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಈ ಕಾರ್ಯಕ್ರಮಗಳು ಅಪೂರ್ವ ಯಶ್ಸುನ್ನು ಕಂಡಿವೆ ಕೂಡ. ಆದರೆ ಕೆಲವು ಕಡೆತಂಡದ ನಿರ್ವಹಣೆ, ಪ್ರಾಯೋಜಕತ್ವದ ರಾಜಕೀಯಗಳನ್ನು ನೋಡುವಾಗ ಬೇಸರವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೃಷಿಸಿರಿಯಲ್ಲಿ ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಕುರಿತು ವಿಭಿನ್ನ ಕಲ್ಪನೆ ನೀಡಿದ ಅವರು, ಕೃಷಿ ಸುಧಾರಣೆ ಮಾತುಗಳನ್ನು ಕೇಳಿ ಸಾಕಾಗಿದೆ. ಆದದ್ದರಿಮದ ಈ ಬಾರಿ ಕೃಷಿಸಿರಿಯನ್ನು ಸಂಪೂರ್ಣವಾಗಿ ಪ್ರಾತ್ಯಕ್ಷಿಕೆಯ ಮಾದರಿಯಲ್ಲಿ ಮಾಡುತ್ತಿದ್ದೇವೆ. ಬರೀ ಪುಸ್ತಕಗಳಲ್ಲಿ ಮಾತ್ರ ತರಕಾರಿಗಳನ್ನು ನೋಡುವ ಮಕ್ಕಳಿಗೆ ಇಲ್ಲಿ ನಿಜವಾದ ತರಕಾರಿಗಳನ್ನು ನೋಡಿ, ಅದನ್ನು ಅನುಭವಿಸುವ ಅವಕಾಶ ನೀಡುತ್ತಿದ್ದೇವೆ ಎಂದರು.

ಸುಮಾರು ಮೂರುವರೆ ಸಾವಿರ ಜನ ಸಂವಾದದಲ್ಲಿ ಭಾಗವಹಿಸಿದ್ದರು. ಇತಿಹಾಸ ತಜ್ಞ ಪುಂಡಿಕಾಯ್ ಗಣಪತಿ ಭಟ್ ಸಂವಾದವನ್ನು ನಿರ್ವಹಿಸಿದರು.

ಕನ್ನಡ ಮಕ್ಕಳಿಗೆ ಉದ್ಯೋಗಾವಕಾಶ ಸಿಗಬೇಕು
ಉದ್ಯೋಗಸಿರಿ ಆರಂಭದ ಉದ್ದೇಶ ತಿಳಿಸಿದ ಡಾ.ಆಳ್ವ, ಬೇರೆ ರಾಜ್ಯಗಳಿಂದ ಸಾಕಷ್ಟು ಜನ ಬಂದು ಇಲ್ಲಿ ಕಂಪನಿಗಳನ್ನು ಆರಂಭಿಸುತ್ತಾರೆ, ಆದರೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ನಿವಾರಣೆಯಾಗಲೇಬೇಕು. ಅದಕ್ಕಾಗಿ ಉದ್ಯೋಗಸಿರಿಯನ್ನು ಆರಂಭಿಸಿ ಕನ್ನಡ ಮಕ್ಕಳಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ನಿರ್ವಹಿಸುವ ಯೋಚನೆಯಿದೆ ಎಂದರು.

`ನಮ್ಮ ತಂಡ ಅತ್ಯುತ್ತಮ ನಿರ್ವಹಣಕಾರರನ್ನು ಹೊಂದಿದೆ’
ನುಡಿಸಿರಿಯ ಅಡುಗೆ ಜವಾಬ್ದಾರಿಯನ್ನು ಇವೆಂಟ್ ಮ್ಯಾನೇಜ್‍ಮೆಂಟ್ ಟೀಮ್‍ಗೆ ಅಥವಾ ಯಾರಾದರೂ ಗುತ್ತಿಗೆದಾರರಿಗೆ ಕೊಡಬಹುದಲ್ಲ ಎಂಬ ಪ್ರಶ್ನೆಗೆ ಉತತರಿಸಿದ ಆಳ್ವ, ನುಡಿಸಿರಿಯಲ್ಲಿ ಇವೆಂಟ್ ಮ್ಯಾನೇಜ್‍ಮೆಂಟ್‍ನ ಕೃತಕ ಆತಿಥ್ಯವನ್ನು ನೀಡಲು ನನಗೆ ಇಷ್ಟವಿಲ್ಲ. ಅದು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಣ ಹಾಕಿದಂತೆ, ನಮಗೇನು ಮಾಡಲು, ಸಿದ್ಧತೆಯ ಸುಖ ಅನುಭವಿಸಲು ಅಲ್ಲಿ ಅವಕಾಶವಿರುವುದಿಲ್ಲ. ಮೇಲಾಗಿ ನಮ್ಮ ತಂಡವೇ ಅತ್ಯುತ್ತಮ ನಿರ್ವಹಣಕಾರರನ್ನು ಹೊಂದಿರುವಾಗ ಬೇರೆಯವರಿಗೆ ಮ್ಯಾನೇಜ್‍ಮೆಂಟ್ ಜವಾಬ್ದಾರಿ ಹೇಗೆ ನೀಡಲಿ ಎಂದು ಸ್ಪಷ್ಟೀಕರಿಸಿದರು.

`ನನಗೆ ತಿನ್ನುವ ಚಟವಿದೆ’
ಇಷ್ಟು ಒತ್ತಡಗಳ ಮಧ್ಯೆಯೂ ಸದಾ ಹಸನ್ಮುಖಿಯಾಗಿರುವ ಡಾ. ಆಳ್ವರ ಜೀವನಕ್ರಮದ ಬಗ್ಗೆ ಸಾರ್ವಜನಿಕರು ಕುತೂಹಲ ತೋರಿಸಿದಾಗ ನಗುತ್ತ ಉತ್ತರಿಸಿದ ಆಳ್ವರು, ನನ್ನದು ಶಿಸ್ತುಬದ್ಧ ಜೀವನಕ್ರಮ. ಪ್ರತಿದಿನವೂ ನನ್ನ ಟೈಮ್‍ಟೇಬಲ್ ಪ್ರಕಾರವೇ ದಿನ ಹೋಗುವುದು. ಆದರೆ ತಿನ್ನುವ ವಿಷಯ ಬಂದರೆ ನಾನು ಎಲ್ಲ ಚೌಕಟ್ಟುಗಳನ್ನು ದಾಟಿಬಿಡುತ್ತೇನೆ. ನನಗೆ ತಿಂಡಿ, ಊಟ ಎಲ್ಲಾ ಚೆನ್ನಾಗಿರಬೇಕು. ನನಗೆ ಮಧುಮೇಹ ಇದೆ; ಆದರೂ ನಾನು ಆಹಾರಪ್ರಿಯ. ಆನ ಪ್ರೀತಿಯಿಂದ ತಂದುಕೊಟ್ಟಾಗ ನಿರಾಕರಿಸಲು ಸಾಧ್ಯವಾಗುವುದಿಲ್ಲ ಎಂದರು.

 


Spread the love