ಅಪೂರ್ಣಾವಸ್ಥೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ: ಬಿಜೆಪಿಯಿಂದ ಧರ್ಮಶಾಸ್ತ್ರಕ್ಕೆ ಅಪಚಾರ: ಹಿಂದೂ ಮಹಾಸಭಾ
ಮಂಗಳೂರು: ಕೇಂದ್ರ ಸರಕಾರ ಪ್ರಭು ಶ್ರೀರಾಮನ ಹೆಸರಲ್ಲಿ ಹಿಂದುತ್ವವನ್ನು ಹೇರಿದರೆ ಅದಕ್ಕೆ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸುತ್ತದೆ. ರಾಮಮಂದಿರ ಪೂರ್ತಿಗೊಳ್ಳುವ ಮುನ್ನವೇ ಅದನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುವುದು ಕೆಟ್ಟ ರಾಜಕೀಯದ ಒಂದು ಭಾಗವಾಗಿದೆ” ಎಂದು ಹಿಂದೂ ಮಹಾಸಭಾ ಸ್ಥಾಪಕ ರಾಜೇಶ್ ಪವಿತ್ರನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅದರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಆಚರಿಸಲಾಗುವುದು. ಹಿಂದೂ ದೇವಾಲಯ ಪೂರ್ಣಗೊಳ್ಳುವ ಮುನ್ನ ಉದ್ಘಾಟನೆ ಮಾಡುವುದನ್ನು ಹಿಂದೂ ಸಂಪ್ರದಾಯ ಒಪ್ಪುವುದಿಲ್ಲ. ಬಿಜೆಪಿ ಪಕ್ಷ ಕರ್ನಾಟಕ ಆಗಿರಬಹುದು ಅಥವಾ ಬೇರೆ ಕಡೆಗಳಲ್ಲಿ ಆಗಿರಬಹುದು ಅದು ಸೋತಿರುವುದು ಹಿಂದೂ ಸಂಸ್ಕೃತಿ ಮತ್ತು ಹಿಂದುತ್ವವನ್ನು ಕಡೆಗಣಿಸಿದ ಕಾರಣಕ್ಕೆ. ಹೀಗಾಗಿ ಬಿಜೆಪಿ ಬೇಕಿರುವವರನ್ನು ಸೇರಿಸಿ ಟ್ರಸ್ಟ್ ರಚನೆ ಮಾಡಿದೆ. ನಿಜವಾದ ಹೋರಾಟಗಾರರು, ಹಿಂದೂ ಮಹಾಸಭಾವನ್ನು ಅದರಿಂದ ಹೊರಗೆ ಹಾಕಿದೆ. ಇದು ನಿಜವಾದ ರಾಮಜನ್ಮಭೂಮಿ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ” ಎಂದು ಕಿಡಿಕಾರಿದರು.
“ನಿರ್ಮೋಯಿ ಅಖಾಡ ಅಂದು ಭಿಕ್ಷೆ ಎತ್ತುವ ಮೂಲಕ ರಾಮಮಂದಿರಕ್ಕಾಗಿ ಹೋರಾಟ ಮಾಡಿತ್ತು. ಆಗ ಬಿಜೆಪಿ ಅಥವಾ ಬೇರಾವುದೇ ಪಕ್ಷಗಳು ಇರಲಿಲ್ಲ. ಈಗ ಅದೇ ನಿರ್ಮೋಯಿ ಅಖಾಡ ಹೊರಗಿಟ್ಟು ಟ್ರಸ್ಟ್ ರಚಿಸಿ ತರಾತುರಿಯಲ್ಲಿ ಮಂದಿರ ಉದ್ಘಾಟನೆ ಮಾಡುತ್ತಿದೆ. ಬಿಜೆಪಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಪಡೆಯಲು ರಾಮಮಂದಿರವನ್ನು ಚುನಾವಣೆ ದೃಷ್ಟಿಯಿಂದ ಬಳಸಿಕೊಳ್ಳುತ್ತಿದೆ. ಮಂತ್ರಾಕ್ಷತೆ ಕೊಡುವುದರಿಂದ ಹಿಡಿದು ಎಲ್ಲದರಲ್ಲೂ ಹಿಂದೂ ಸಂಸ್ಕೃತಿಯನ್ನು ಕಡೆಗಣಿಸಿದೆ” ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾ ಸ್ಥಾಪಕ ರಾಜೇಶ್ ಪವಿತ್ರನ್, ಖಜಾಂಚಿ ಲೋಕೇಶ್ ಉಳ್ಳಾಲ, ಸುವರ್ಣ, ಹಿಮಾಂಶು, ಪ್ರವೀಣ್ ಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು