ಅಪ್ರಾಪ್ತ ಮಗುವಿನ ಅಪಹರಣ – 2 ಗಂಟೆಯೊಳಗೆ ಆರೋಪಿಯ ಬಂಧನ
ಮಂಗಳೂರು: ನಗರದ ಅಳಪೆ ಪಡೀಲ್‌ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಶನಿವಾರ ಸಂಜೆ ನಡೆದ ಮಗು ಅಪಹರಣ ಪ್ರಕರಣವನ್ನು ಕೇವಲ 2 ಗಂಟೆಯೊಳಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಬೇಧಿಸಿದ್ದಾರೆ.
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಎರ್ನಾಕುಳಂ ಜಿಲ್ಲೆಯ ಅನೀಶ್ ಕುಮಾರ್ (49) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಂಗ ಸೆರೆ ವಿಧಿಸಲಾಗಿದೆ.
ಘಟನೆಯ ವಿವರ: ಆ.28ರಂದು ಆರೋಪಿ ಅನೀಶ್ ಕುಮಾರ್ ತನ್ನ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಗೆ ರೈಲಿನಲ್ಲಿ ಹೋಗಿದ್ದ. ಗೋವಾದಲ್ಲಿ ರೈಲಿನಿಂದ ಇಳಿದ ಈತ ಆ.31ರಂದು ಮಂಗಳೂರಿಗೆ ಬಂದಿದ್ದ. ಹಾಗೇ ಪಡೀಲ್ ಅಳಪೆಯ ಅರಣ್ಯ ಭವನದ ಮುಂದೆ ಹೆಣ್ಣು ಮಗು ನಡೆದುಕೊಂಡು ಹೋಗುವುದನ್ನು ಕಂಡ ಈತ ಆ ಮಗುವನ್ನು ಅಪಹರಿಸಿದ ಎನ್ನಲಾಗಿದೆ.
ತನಗೆ ಹೆಣ್ಣು ಮಕ್ಕಳಿಲ್ಲದ ಕಾರಣಕ್ಕೆ ತಾನು ಈ ಮಗುವನ್ನು ಕರೆದುಕೊಂಡು ಹೋಗಿರುವುದಾಗಿ ಆರೋಪಿ ಪೊಲೀಸರ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಮಗು ಅಪಹರಣ ಬಗ್ಗೆ ದೂರು ದಾಖಲಾದೊಡನೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಆರೋಪಿ ತೆರಳಿರುವ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಕಾಸರಗೋಡಿನ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ ಕಾಸರಗೋಡಿಗೆ ತೆರಳಿ ಆರೋಪಿಯನ್ನು ಬಂಧಿಸಿದರಲ್ಲದೆ ಅಪಹರಣಕ್ಕೊಳಗಾದ ಮಗುವನ್ನು ರಕ್ಷಿಸಿರುವುದಾಗಿ ತಿಳಿದು ಬಂದಿದೆ.
ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ. ನಾಗರಾಜ್‌ರ ಮಾರ್ಗದರ್ಶನದಲ್ಲಿ ಎಸ್ಸೈ ಶಿವಕುಮಾರ್, ಎಸ್ಸೈ ಅಶೋಕ್ ಹಾಗೂ ಸಿಬ್ಬಂದಿ ಅಶೀತ್ ಡಿಸೋಜ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.