‘ಅಭಿವೃದ್ದಿಯಾಗುತ್ತಿರುವ ಮಂಗಳೂರಿಗೆ ಹೊರ ವರ್ತುಲ ರಸ್ತೆ ನಿರ್ಮಿಸಲು ಕ್ರಮ ಜರುಗಿಸಿʼ
- ಶಿರಾಡಿಘಾಟ್ ಹೆದ್ದಾರಿ ಅಭಿವೃದ್ದಿಗೆ ಡಿಪಿಆರ್ ಪ್ರಕ್ರಿಯೆ ಚುರುಕುಗೊಳಿಸಿ
- ಪ್ರಗತಿ ಹೊಂದುತ್ತಿರುವ ಕಡಲ ನಗರಿಯ ಬಗ್ಗೆ ವಿಶೇಷ ಗಮನಹರಿಸುವಂತೆ ಲೋಕೋಪಯೋಗಿ ಸಚಿವ ಜಾರಕಿಹೊಳಿಗೆ ಸಂಸದ ಕ್ಯಾ. ಚೌಟ ಮನವಿ
ಮಂಗಳೂರು: ಶಿರಾಡಿ ಘಾಟಿ ಹೆದ್ದಾರಿ ಅಭಿವೃದ್ಧಿ, ಮಂಗಳೂರು ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ಬಾಕಿಯಿರುವ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಿ ಆದಷ್ಟು ಬೇಗ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಗೆ ಸಂಬಂಧಿಸಿದಂತೆ ಸಚಿವರೊಂದಿಗೆ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಕ್ಯಾ. ಚೌಟ ಅವರು, ಹಲವು ಅಭಿವೃದ್ಧಿ ಯೋಜನೆಗಳ ಡಿಪಿಆರ್ ತಯಾರಿ ಬಾಕಿ ವಿಚಾರ ಹಾಗೂ ಹೊಸ ಪ್ರಸ್ತಾಪಿತ ಯೋಜನೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದಾರೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಶಿರಾಡಿ ಘಾಟಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನು ಕೂಡ ಡಿಪಿಆರ್ ಸಿದ್ಧಗೊಂಡಿಲ್ಲ. ಅಲ್ಲದೆ ಈ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು ಕೂಡ ಬಾಕಿಯಿದೆ. ಹೀಗಾಗಿ, ಶಿರಾಡಿ ಫಾಟಿ ರಸ್ತೆ ಅಭಿವೃದ್ಧಿಯ ಸಾಧ್ಯಾ-ಸಾಧ್ಯತೆಗಳ ಬಗ್ಗೆ ಆದಷ್ಟು ಬೇಗ ಯೋಜನಾ ವರದಿ ಸಿದ್ಧಪಡಿಸಬೇಕು. ಈ ಪ್ರಸ್ತಾವಿತ ಯೋಜನೆ ಬಗ್ಗೆ ನಾನು ಹೆದ್ದಾರಿ ಇಲಾಖೆ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಯೋಜನಾ ವರದಿ ಸಿದ್ಧಪಡಿಸುವುದು ವಿಳಂಬವಾದಷ್ಟು ಈ ಹೆದ್ದಾರಿ ಅಭಿವೃದ್ಧಿ ಯೋಜನೆ ಜಾರಿಗೂ ಹಿನ್ನಡೆಯಾಗುತ್ತದೆ. ಅಲ್ಲದೆ, ಈ ಯೋಜನೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯುವುದಕ್ಕೂ ತಮ್ಮ ಪೂರ್ಣ ಸಹಕಾರ ಹಾಗೂ ಮಧ್ಯಪ್ರವೇಶದ ಅಗತ್ಯವಿದೆ. ಆ ಮೂಲಕ ಈ ಹೆದ್ದಾರಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಕ್ಕೆ ಆದಷ್ಟು ಬೇಗ ಪೂರಕ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಮಂಗಳೂರಿಗೆ ಹೊರ ವರ್ತುಲ ರಸ್ತೆ
ರಾಜ್ಯದಲ್ಲೇ 2ನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ಕೆಲವೆಡೆ ವಾಹನ ದಟ್ಟನೆ ಸಮಸ್ಯೆ ಎದುರಾಗುತ್ತಿದೆ. ಇನ್ನೊಂದೆಡೆ, ಕರಾವಳಿ ತೀರವನ್ನು ಹೊಂದಿರುವ ಕಾರಣ ನಗರೀಕರಣದ ವ್ಯಾಪ್ತಿ ವಿಸ್ತರಣೆಗೂ ನಾನಾ ರೀತಿಯ ಸವಾಲು ಎದುರಾಗುತ್ತಿವೆ. ರಸ್ತೆ, ರೈಲು, ಬಂದರು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆಯಿಂದ ಈ ನಗರಕ್ಕೆ ಹೆಚ್ಚಿನ ಸಂಖ್ಯೆಯ ಜನರಿಗೂ ಭೇಟಿಗೂ ಅನುಕೂಲ ಕಲ್ಪಿಸಿದೆ. ಆದರೆ, ನಗರೀಕರಣದ ದೃಷ್ಟಿಯಿಂದ ಮಂಗಳೂರು ಹೃದಯಭಾಗದ ಜನದಟ್ಟನೆ ಹಾಗೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಹೊರ ವರ್ತುಲ ರಸ್ತೆ(ಔಟರ್ ರಿಂಗ್ ರೋಡ್) ನಿರ್ಮಿಸುವ ಅಗತ್ಯತೆಯಿದೆ. ಈ ಹಿನ್ನಲೆ ಭವಿಷ್ಯದ ಮಂಗಳೂರು ನಗರದ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಸೂಕ್ತ ಹೊರ ವರ್ತುಲ ರಸ್ತೆ ನಿರ್ಮಿಸುವುದಕ್ಕೆ ವಿಸ್ತೃತ ಯೋಜನಾ ವರದಿಯನ್ನು ಶೀಘ್ರ ತಯಾರಿಸುವಂತೆ ಕ್ಯಾ. ಚೌಟ ಅವರು ಸಚಿವ ಜಾರಕಿಹೊಳಿಗೆ ಸಲಹೆ ಮಾಡಿದ್ದಾರೆ.
ಮಾಣಿ-ಸಂಪಾಜೆ ಡಿಪಿಆರ್ ತಯಾರಿ ಚುರುಕುಗೊಳಿಸಿ
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಮುಖ ಯಾತ್ರಾ ಸ್ಥಳಗಳಾಗಿರುವ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಎನ್ಎಚ್-275ನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಸುಮಾರು 71.60 ಕಿಮೀ. ಉದ್ದದ ಈ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಡಿಪಿಆರ್ ಸಿದ್ಧಪಡಿಸುವ ಕಾರ್ಯಕ್ಕೆ ಚುರುಕು ನೀಡಬೇಕಾಗಿದೆ. ಹೀಗಾಗಿ, ಈ ಡಿಪಿಆರ್ ವರದಿಯನ್ನು ತಯಾರಿಸಲು ತಮ್ಮ ಇಲಾಖೆಯಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ಕ್ಯಾ. ಚೌಟ ಅವರು ಸಚಿವರನ್ನು ವಿನಂತಿಸಿದ್ದಾರೆ.
ಇನ್ನೊಂದೆಡೆ, ಕೇರಳ ಹಾಗೂ ಬೆಂಗಳೂರು ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದಕ್ಕೆ ಪೆರಿಯಶಾಂತಿ-ಪೈಚಾರ್ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ಎನ್.ಎಚ್ 75ನ್ನು ಎನ್.ಎಚ್ 275 ಹೆದ್ದಾರಿ ಜತೆ ಸಂಪರ್ಕಿಸಲು ಸ್ಪರ್ ರಸ್ತೆ ನಿರ್ಮಿಸಬೇಕೆಂದು ಕ್ಯಾ. ಚೌಟ ಅವರು ಸಚಿವ ಸತೀಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ.