ಕುಂದಾಪುರ: ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ಸೋಲಾರ್ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣೆ ಬುಧವಾರ ನಡೆಯಿತು.
ಕರ್ನಾಟಕದ ಮಾಜಿ ಲೋಕಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಸೋಲಾರ್ ದೀಪ ಯೋಜನೆಗೆ ಅಮಾಸೆಬೈಲು ಪೇಟೆಯಲ್ಲಿ ದಾರಿದೀಪ ಉದ್ಘಾಟನೆಯೊಂದಿಗೆ ಚಾಲನೆ ನೀಡಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೀನು ಮಾರುಕಟ್ಟೆಗೆ ಚಾಲನೆ ನೀಡಿದರೆ, ಜಿಲ್ಲಾ ಪಂಚಾಯತ್ ಅದ್ಯಕ್ಷ ದಿನಕರ ಬಾಬು ಅವರು ಕೃಷಿ ಮಾರುಕಟ್ಟೆಯನ್ನು ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಜಯರಾಮ್ ಭಟ್ ಅಮಾಸೆಬೈಲು ಪ್ರೌಢ ಶಾಲೆಯಲ್ಲಿ ನಿರ್ಮಿಸಿದ ನೂತನ ಬಾಲಕ ಶೌಚಾಲಯವನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಎ ಜಿ ಕೊಡ್ಗಿ ಅವರು ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್‌ಆರ್‌ಇ)ದಿಂದ ಶೇ.30, ರಾಜ್ಯದ ಕರ್ನಾಟಕನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್)ದಿಂದ ಶೇ.20, ನಕ್ಸಲ್ ಪೀಡಿತ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ಹಾಗೂ ಫಲಾನುಭವಿಗಳ ವಂತಿಗೆಯೊಂದಿಗೆ ಈ ಯೋಜನೆಯನ್ನು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅನುಷ್ಠಾನಗೊಳಿಸಲಿದೆ ಎಂದರು. ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳ 1,497 ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸುವ ಗುರಿ ಇದೆ. ಪ್ರತಿ ಮನೆಗೆ 2 ದೀಪಗಳಿಗೆ 9,900ರೂ., 4 ದೀಪಗಳಿಗೆ 16,000ರೂ. ಹಾಗೂ ದಾರಿದೀಪಗಳಿಗೆ 23,500 ದರವನ್ನು ನಿಗದಿ ಪಡಿಸಿದ್ದು, ಐದು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ಮಾಡಲು ಒಪ್ಪಿಕೊಂಡಿದೆ ಎಂದರು.
ಉದ್ಘಾಟನಾ ಸಂದೇಶ ನೀಡಿದ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ದೇಶದ ಎಲ್ಲಾ ಅಂಗಗಳು ಇಂದು ಭೃಷ್ಟಾಚಾರದಿಂದ ಹದಗೆಟ್ಟಿದ್ದು, ಮೂರು ಅಂಗಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದ್ದ ಮಾಧ್ಯಮ ರಂಗವೂ ಕೂಡ ನೀರಾ ರಾಡಿಯಾ ಕೇಸಿನ ಬಳಿಕ ಅದೇ ದಾರಿಯಲ್ಲಿ ಸಾಗಿರುವುದು ಅಪಾಯಕಾರಿ ಸಂಗತಿಯಾಗಿದೆ. ರಾಜಕಾರಣಿಗಳಿಂದಲೇ ಒಂದು ಗ್ರಾಮ ಅಭಿವೃದ್ಧಿಯಾಗಬೇಕೆಂದಿಲ್ಲ ಬದಲಾಗಿ ಅಭಿವೃದ್ಧಿಯನ್ನು ಮಾಡಬೇಕು ಎನ್ನುವ ಅಪೇಕ್ಷೆ ಇರುವ ಮುತ್ಸದ್ದಿಗಳು ಇದ್ದರೆ ಅಂತಹ ಗ್ರಾಮ ಅಭಿವೃದ್ಧಿ ಕಾಣುತ್ತದೆ. ಮುತ್ಸದ್ದಿಗಳು ಮಾಡುವುದು ಮುಂದಿನ ಜನಾಂಗಕ್ಕೆ ಉಳಿಯುವುದಕ್ಕಾಗಿಯಾದರೆ ರಾಜಕಾರಣಿಗಳು ಚುನಾವಣಾ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುತ್ತಾರೆ. ಆದ್ದರಿಂದ ಇಂದಿನ ಯುವ ಸಮುದಾಯ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಭೃಷ್ಟಾಚಾರಿಗಳಿಗೆ ಮತ ನೀಡದೆ ಪ್ರಾಮಾಣಿಕರಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ನವಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಜಯ ಲಕ್ಷ್ಮೀ ಶೆಡ್ತಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಿರಿಯಣ್ಣ, ಭಾರತೀಯ ವಿಕಾಸ ಟ್ರಸ್ಟ್‍ನಕೆ.ಎಂ.ಉಡುಪ ಅತಿಥಿಗಳಾಗಿದ್ದರು. ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ತಾಪಂ ಸದಸ್ಯಜ್ಯೋತಿ ಪೂಜಾರ್ತಿ, ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ, ಟಿ.ಚಂದ್ರಶೇಖರ ಶೆಟ್ಟಿ, ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.