ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ; ಮೋಹನ್ ಭಾಗವತ್ 

Spread the love

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ; ಮೋಹನ್ ಭಾಗವತ್ 

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಘೋಷಿಸಿದ್ದಾರೆ.

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಲಿದೆ ಅದು ಬಿಟ್ಟು ಇನ್ಯಾವುದೇ ಕಟ್ಟಡಗಳು ಬರುವುದಿಲ್ಲ. ಈಗಾಗಲೇ ರಾಮಮಂದಿರ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ. ಹಲವು ವರ್ಷಗಳ ಪ್ರಯತ್ನದ ಪರಿಣಾಮ ವಿವಾದ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

ಈ ಮೊದಲಿದ್ದ ಮಾದರಿಯಲ್ಲೇ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ. ಅದೇ ಕಲ್ಲುಗಳಿಂದ ರಾಮಮಂದಿರ ಕಟ್ಟಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ, ಹಿಂದೂ ದೇಶ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಆದರೆ ಇದಕ್ಕೂ ಮುಖ್ಯವಾಗಿ ನಮಗೆ ಸಾರ್ವಜನಿಕರ ಜಾಗೃತಿಯೂ ಮುಖ್ಯವಾಗಿದೆ. ನಮ್ಮ ಗುರಿಯನ್ನು ಸಾಧಿಸಲು ನಾವು ಸಮೀಪಿಸಿದ್ದರೂ ಸಾರ್ವಜನಿಕರ ವಿಚಾರದಲ್ಲಿ ನಾವು ಹೆಚ್ಚು ಜಾಗರೂಕರವಾಗಿರಬೇಕು ಎಂದು ಭಾಗವತ್‌ ಹೇಳಿದ್ದಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ಅಯೋಧ್ಯೆಯಲ್ಲಿ 2019ರೊಳಗೆ ರಾಮಮಂದಿರ ನಿರ್ಮಾಣವಾಗಲಿದೆ. ರಾಮಮಂದಿರ ನಿರ್ಮಾಣವಾಗುವುದು ಖಚಿತ  ಎಂದ ಸ್ವಾಮೀಜಿ ಪರ್ಯಾಯ ಪೀಠದಿಂದ ಇಳಿದ ಬಳಿಕ ನಾನು ನಿಮ್ಮೊಂದಿಗೆ ಹೋರಾಟದಲ್ಲಿ ಕೈಜೋಡಿಸುತ್ತೇನೆ. ಸಂತರ ಜೊತೆಗೆ ದೈಹಿಕವಾಗಿ ಇದ್ದು, ಇದಕ್ಕಾಗಿ ಪ್ರಯತ್ನ ನಡೆಸುವುದಾಗಿ ಹೇಳಿದರು. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಒಂದು ನಿಯಮ ಬಹುಸಂಖ್ಯಾತರಿಗೆ ಬೇರೆಯೇ ಆದ ನಿಯಮಗಳಿದ್ದು, ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಬಹುಸಂಖ್ಯಾತರಿಗೂ ಸಿಗುವಂತಾಗಬೇಕು ಎಂದರು.ಗೋಹತ್ಯೆ ಕೇವಲ ಕೇಂದ್ರ ಸರ್ಕಾರದ ವಿಚಾರವಲ್ಲ.ದೇಶದಲ್ಲಿ ಗೋ ಹತ್ಯೆ ಸಂಪೂರ್ಣವಾಗಿ ನಿಷೇಧವಾಗಬೇಕು. ಗೋ ಹತ್ಯೆ ನಿಷೇಧ ಸಂಬಂಧ ರಾಜ್ಯದಲ್ಲಿ ಆಂದೋಲನ ನಡೆಯಲಿ ಎಂದು ಹೇಳಿದರು. ಉತ್ತಮ ಚಾರಿತ್ರ್ಯ ಭಕ್ತಿ ಹೊಂದಿದ ದಲಿತ ಬ್ರಾಹ್ಮಣನಿಗಿಂತ ಶ್ರೇಷ್ಠ.ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲಾಗುತ್ತಿದೆ.ವೀರಶೈವ, ಲಿಂಗಾಯತ ಎರಡೂ ಹಿಂದೂ ಧರ್ಮವೇ. ಇಬ್ಬರೂ ಶಿವನನ್ನು ಆರಾಧಿಸುತ್ತಾರೆ. ಧರ್ಮದ ಹೆಸರಿನಲ್ಲಿ ಪಕ್ಷಪಾತ, ಭೇದಭಾವ ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.

ಉಡುಪಿಯಲ್ಲಿ ನಡೆಯುತ್ತಿರುವ ಮೂರು ದಿನದ ಧರ್ಮ ಸಂಸದ್‌ನಲ್ಲಿ ರಾಮ ಮಂದಿರ ನಿರ್ಮಾಣ, ಮತಾಂತರ ತಡೆಗಟ್ಟುವಿಕೆ ಮತ್ತು ಗೋ ರಕ್ಷಣೆ ಈ ಮೂರು ವಿಚಾರವನ್ನು ಚರ್ಚಿಸಲಾಗುತ್ತದೆ.


Spread the love