ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ– ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಭೆ ಶನಿವಾರ ಜರುಗಿತು. ಟ್ರಸ್ಟ್ ಸಭೆಯಲ್ಲಿ 15 ಟ್ರಸ್ಟಿಗಳಲ್ಲಿ 12 ಟ್ರಸ್ಟಿಗಳು ಅಯೋಧ್ಯೆ ಸಭೆಯಲ್ಲಿ ಪಾಲ್ಗೊಂಡಿದ್ದು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ 3 ಟ್ರಸ್ಟಿಗಳು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಮಾಧ್ಯಮಗಳಿಗೆ ಉಡುಪಿ ಯಲ್ಲಿ ಸಭೆಯ ಮಾಹಿತಿಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ.
ಮಂದಿರ ನಿರ್ಮಾಣ ಕ್ಕೆ ಮೊದಲು ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡಲು ಸಭೆ ನಿರ್ಣಯಿಸಿದ್ದು, ಎಲ್ ಆಂಡ್ ಟಿ ಕಂಪೆನಿ ಮೂಲಕ ಮಂದಿರದ ನಿರ್ಮಾಣ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಅಧ್ಯಯನ ಮಾಡಲಿದ್ದು, 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಅಲ್ಲದೆ ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಚರ್ಚೆ ನಡೆದಿದೆ ಎಂದರು.
ಮಂದಿರವು ಸುಮಾರು ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಇದರೊಂದಿಗೆ ಎಪ್ಪತ್ತು ಎಕರೆ ಪರಿಸರ ಅಭಿವೃದ್ದಿಗೆ ಸಾವಿರ ಕೋಟಿ ರೂ ಅವಶ್ಯಕತೆ ಇದೆ. ಇದಕ್ಕಾಗಿ ಬೇರೆ ಬೇರ ಕಂಪೆನಿಗಳ ಸಿಎಸ್ ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡಲಾಗುವುದು ಅಲ್ಲದೆ ರಾಮಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಹಣ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. ಪ್ರತೀ ವ್ಯಕ್ತಿಯ ಮೂಲಕ ಹತ್ತು ರೂಪಾಯಿ ಅಂತೆ ಒಂದು ಮನೆಯಿಂದ ನೂರು ರುಪಾಯಿ ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ವ್ಯಾಪಕ ಆಂದೋಲನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ದೇಶದಾದ್ಯಂತ ಈ ಆಂದೋಲನ ನವೆಂಬರ್ 25 ರಿಂದ ಡಿಸೆಂಬರ್ 25ತನಕ ವ್ಯಾಪಕ ಆಂದೋಲನ ನಡೆಯಲಿದೆ ಎಂದರು.
ಮಂದಿರದ ಭೂಮಿ ಪೂಜನಾ ಕಾರ್ಯ ಯಾವಾಗ ನಡೆಸೋದು ಎಂದು ಶೀಘ್ರ ತೀರ್ಮಾನ ಮಾಡಲಿದ್ದು ಹದಿನೈದು ದಿನಗಳ ಮುಂಚೆ ಭೂಮಿಪೂಜನಾ ಕಾರ್ಯದ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.