ಅಯೋಧ್ಯೆಯ ತೀರ್ಪನ್ನು ಹಿಂದೂ – ಮುಸ್ಲಿಂರು ಸಮಾನವಾಗಿ ಸ್ವೀಕರಿಸಿ, ಅತಿರೇಕದ ವರ್ತನೆ ಬೇಡ – ಪೇಜಾವರ ಸ್ವಾಮೀಜಿ ಮನವಿ
ಉಡುಪಿ: ಅಯೋಧ್ಯೆಯ ಕುರಿತು ಬರಲಿರುವ ತೀರ್ಪು ಹಿಂದೂಗಳ ಪರವಾಗಿ ಬಂದಲ್ಲಿ ವಿಜಯೋತ್ಸವ ಮಾಡದೇ ವಿರೋಧವಾಗಿ ಬಂದಲ್ಲಿ ಪ್ರತಿಭಟನೆಗಿಳಿಯದೆ ಶಾಂತವಾಗಿ ಸ್ವೀಕರಿಸುವಂತೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರು ಜನರಿಗೆ ಮನವಿ ಮಾಡಿದ್ದಾರೆ.
ಅವರು ಗುರುವಾರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸದ್ಯವೇ ಅಯೋಧ್ಯೇಯ ತೀರ್ಪು ಹೊರಬರಲಿದ್ದು ಹಿಂದೂಗಳ ಪರ ತೀರ್ಪು ಬಂದ್ರೆ ವಿಜಯೋತ್ಸವ ಬೇಡ ಅಲ್ಲದೆ ಯಾವುದೇ ರೀತಿಯಲ್ಲಿ ಬೀದಿಗಿಳಿದು ಮೆರವಣಿಗೆ ಮಾಡಬಾರದು. ತೀರ್ಪನ್ನು ಶಾಂತವಾಗಿ ಸ್ವೀಕರಿಸಬೇಕು ಮತ್ತು ದೇವಸ್ಥಾನ, ಮಠದ ಒಳಗೆ ಹರ್ಷಾಚರಣೆ ಮಾಡಿದರೆ ಸಾಕು ಎಂದು ಅವರು ಹೇಳಿದ್ದಾರೆ.
ಅದೇ ರೀತಿಯಲ್ಲಿ ಮುಸ್ಲಿಂ ಬಾಂಧವರೂ ಕೂಡಾ ತೀರ್ಪನ್ನು ಶಾಂತವಾಗಿ ಸ್ವೀಕರಿಸಬೇಕು. ಪರ ಅಥವಾ ವಿರುದ್ಧ ತೀರ್ಪು ಬಂದರೆ ಅತಿರೇಕದ ವರ್ತನೆ ಬೇಡ ಹಿಂದೂಗಳು- ಮುಸಲ್ಮಾನರು ಸಮಾನವಾಗಿ ತೀರ್ಪನ್ನು ಸ್ವೀಕರಿಸಿ ಕರ್ನಾಟಕ , ಕರಾವಳಿ ಜನ ಶಾಂತವಾಗಿರಬೇಕು ಎಂದರು.
ತೀರ್ಪು ಅನುಕೂಲವಾಗಿ ಬರುತ್ತದೆ ಎಂದು ಭಾವಿಸಿದ್ದು, ಒಂದು ವಾರದ ಒಳಗೆ ರಾಮಮಂದಿರ ತೀರ್ಪು ಬರಬಹುದು. ಸಂವಿಧಾನ, ಸುಪ್ರೀಂ ಕೋರ್ಟ್ ಗೆ ದೇಶದ ಜನ ಗೌರವ ಕೊಡಬೇಕು ಸಂಘರ್ಷ ಪ್ರತಿಭಟನೆಗೆ ಯಾರೂ ಅವಕಾಶ ಮಾಡಿಕೊಡಬಾರದು. ರವಿಶಂಕರ್ ಗುರೂಜಿ ಕೂಡಾ ಶಾಂತಿ ಕಾಪಾಡಲು ಕರೆ ಕೊಟ್ಟಿದ್ದಾರೆ ಮಂದಿರ ವಿಚಾರದಲ್ಲಿ ಅಂತರಂಗದ ಸಂಧಾನ ಆಗಿದೆ ಎಂಬ ಮಾಹಿತಿಯಿದೆ ಎಂದು ಸ್ವಾಮೀಜಿ ಹೇಳಿದರು.