ಅಯೋಧ್ಯೆ ತೀರ್ಪು ; ರಾಮ ರಹೀಮರ ಪರಸ್ಪರ ಸಹಕಾರದಿಂದ ದೇಶಕ್ಕೆ ಒಳಿತಾಗಲಿ – ಪಲಿಮಾರು ಸ್ವಾಮೀಜಿ
ಉಡುಪಿ: ಉತ್ಥಾನ ದ್ವಾದಶಿಯ ಪರ್ವ ಕಾಲದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟು, ದೇಶದ ಆರಾಧ್ಯ ದೇವರನ್ನು ಎಬ್ಬಿಸುವಂತಹ ಉತ್ತಮ ತೀರ್ಪಿನ ನ್ಯಾಯ ನೀಡಿದೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ನ್ಯಾಯಾಲಯದ ಮೇಲಿಟ್ಟ ನಿರೀಕ್ಷೆ, ಭರವಸೆ ಈಡೇರಿದೆ, ನ್ಯಾಯ ಸಿಕ್ಕಿದೆ. ನ್ಯಾಯಾಧೀಶರೂ ಅಭಿನಂದನೀಯರು. ಹಿಂದೂಗಳ ಪರ ನ್ಯಾಯಕ್ಕೆ ಹಿಂದೆ ಮುಂದೆ ನೋಡದೆ, ಸಂಕೋಚವಿಲ್ಲದೆ ದಿಟ್ಟ ತೀರ್ಮಾನ ಕೈಗೊಂಡಿದ್ದಾರೆ.
ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದುಗೊಳಿಸಲು ಭೂಮಿಕೆ ಸಿದ್ಧಪಡಿಸಿದಂತೆ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಕೈಗೊಂಡ ಕ್ರಮ ಶ್ಲಾಘನೀಯ. ಮಂದಿರ ನಿರ್ಮಾಣಕ್ಕೆ ಉತ್ತಮ ವಾತಾವರಣ ಮೂಡಿದೆ.
ವಿವಾದಿತ ಗುಂಬಸ್ ಬೀಳುವಾಗ ಭಜನೆ ನಡೆಯುತ್ತಿದ್ದರೆ ಉಡುಪಿಯಲ್ಲಿ ಕಳೆದೆರಡು ವರ್ಷಗಳಿಂದ ಆಯೋಜಿಸಿದ ಅಖಂಡ ಭಜನೆ ಭಕ್ತರ ಭಕ್ತಿಯ ಜತೆಗೆ ನ್ಯಾಯಾಲಯದ ನ್ಯಾಯ ತೀರ್ಮಾನಕ್ಕೆ ವರವಾಗಿದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದ ಕೃಷ್ಣ ಯಾರೋ ಒಬ್ಬರಲ್ಲಿ ನಿಂತು ಧರ್ಮದ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಐದು ಎಕರೆ ಜಾಗದ ನ್ಯಾಯ ಮಸೀದಿ ನಿರ್ಮಾಣಕ್ಕೆ ಸಂದಿದೆ. ರಾಮ ರಹೀಮರ ಪರಸ್ಪರ ಸಹಕಾರದಿಂದ ದೇಶಕ್ಕೆ ಒಳಿತಾಗಲಿ ಎನ್ನುವ ಹಾರೈಕೆಯೊಂದಿಗೆ ಶ್ರೀಕೃಷ್ಣಮುಖ್ಯಪ್ರಾಣರಿಗೆ ಪ್ರಾರ್ಥನೆ ಸಲ್ಲಿಸುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.