ಅರಣ್ಯ ಸಂರಕ್ಷಣೆಗೆ ಇಲಾಖೆಯ ಆದ್ಯತೆ- ರಮಾನಾಥ ರೈ
ಉಡುಪಿ : ಕಳೆದ ಬಾರಿ ಉಡುಪಿಯಲ್ಲಿ ಲಕ್ಷ ವೃಕ್ಷ ಆಂದೋಲನದ ವೇಳೆ ಘೋಷಿಸಿದಂತೆ ಶಂಕರನಾರಾಯಣ ವಲಯದ ವಂಡಾರು ಮೀಸಲು ಅರಣ್ಯ ಕ್ಷೇತ್ರದಲ್ಲಿ ‘ವಂಡಾರು ಶ್ರೀಗಂಧ ಸಂರಕ್ಷಣಾ ಪ್ರದೇಶ’ ವನ್ನು ಇಂದು ಉದ್ಘಾಟಿಸಲಾಗಿದೆ.
ನುಡಿದಂತೆ ನಡೆದಿದ್ದೇವೆ; ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪರಿಸರ ಪ್ರೀತಿ ಮೂಡಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದು, ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಇಲಾಖೆ ಬದ್ಧವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಬಿ. ರಮಾನಾಥ ರೈ ಹೇಳಿದರು.
ಅವರಿಂದು ಶಂಕರನಾರಾಯಣ ವಲಯದ ವಂಡಾರು ಮೀಸಲು ಅರಣ್ಯ ಕ್ಷೇತ್ರದಲ್ಲಿ ನಿರ್ಮಿಸಿರುವ ‘ವಂಡಾರು ಶ್ರೀಗಂಧ ಸಂರಕ್ಷಣಾ ಪ್ರದೇಶ’ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೋಟಿ ವೃಕ್ಷ ಆಂದೋಲನದ ಪರಿಕಲ್ಪನೆ ಕೋಟಿ ಸಸ್ಯಗಳನ್ನು ನೆಡುವುದು ಎಂದಲ್ಲ ಎಂದ ಸಚಿವರು, ಪರಿಸರ ಪ್ರೀತಿಯ ಮನೋಭಾವ ಎಲ್ಲರಲ್ಲಿ ಬೆಳೆಸುವುದು ಕಾರ್ಯಕ್ರಮದ ಉದ್ದೇಶ ಎಂದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದ ಅವರು ಜಾಗತಿಕ ತಾಪಮಾನ ತಡೆ ಪ್ರತಿಯೊಬ್ಬನ ಹೊಣೆ ಎಂಬುವುದನ್ನು ಈ ಸಂಧರ್ಭದಲ್ಲಿ ತಿಳಿಸಿದರು.
1.55 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಮುಖ್ಯವಾಗಿ ಆವರಣಗೋಡೆಗೆ 1.28 ಕೋಟಿ, ವೀಕ್ಷಕ ಕೊಠಡಿಗೆ 4 ಲಕ್ಷ, ಬೆಂಕಿರೇಖೆ ನಿರ್ಮಾಣಕ್ಕೆ 0.297 ಲಕ್ಷ, ಮುಳ್ಳುತಂತಿ ಬೇಲಿ ಕಂಬಳಗದ್ದೆ 7.91 ಲಕ್ಷ , ಪರಿವೀಕ್ಷಣ ಪಥ 1.68 ಲಕ್ಷ, ಸೂಚನಾ ಫಲಕ ನಿರ್ಮಾಣ 0.250 ಲಕ್ಷ, ವೀಕ್ಷಣ ಗೋಪುರ 3 ಲಕ್ಷ, ಸಾಂಪ್ರದಾಯಿಕ ನಿರ್ವಹಣಾ ಕೆಲಸ 0.492 ಲಕ್ಷ, ಮುಂಗಡ ಕಾಮಗಾರಿ ಹಾಗೂ ಇಂಗುಗುಂಡಿ ನಿರ್ಮಾಣ 9.791 ಲಕ್ಷ ರೂ.ಗಳ ಕಾಮಗಾರಿಯನ್ನು ನಡೆಸಲಾಗಿದೆ ಎಂದು ವಿವರಿಸಿದರು. ಸಂರಕ್ಷಣೆಗೆ ಕಾವಲು ಗೋಪುರ ನಿರ್ಮಿಸಿದ್ದು, ಕಾವಲುಗಾರರು ಇರುತ್ತಾರೆ. ಅಂತರ್ಜಲ ವೃದ್ಧಿಗೂ ಈ ಯೋಜನೆ ನೆರವಾಗಲಿದೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರಕಂಬದಲ್ಲೂ ಇದೇ ಮಾದರಿ ಯೋಜನೆ ರೂಪಿಸಲಾಗಿದೆ. ಶ್ರೀಗಂಧ ಸ್ವಾಭಾವಿಕವಾಗಿ ಬೆಳೆಯುವ ಭೂಮಿಯನ್ನು ಆರಿಸಿಕೊಂಡು ಶ್ರೀಗಂಧವನ ನಿರ್ಮಿಸಲಾಗಿದೆ.
ಅರಣ್ಯ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 2000 ದಿಂದ 3000 ನರ್ಸರಿ ಬೆಳೆಸಲು ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಎಲ್ಲ ಜಿಲ್ಲೆಯ ಸಿಇಒ ಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಲಾಗಿದೆ ಎಂದು ಸಚಿವರು ಹೇಳಿದರು. ಗಿಡ ಬೆಳೆಸುವವರಿಗೆ ಗಿಡ ಲಭ್ಯವಾಗಿಸುವ ಕೆಲಸ ನಮ್ಮದಾಗಬೇಕೆಂಬುದೇ ಇದರ ಹಿಂದಿನ ಉದ್ದೇಶ ಎಂದರು. ಇದಕ್ಕಾಗಿ ಸಾಮಾಜಿಕ ಅರಣ್ಯ ವಿಭಾಗದವರು ನರ್ಸರಿ ಬೆಳೆಯುತ್ತಿದ್ದಾರೆ ಎಂದು ಸಚಿವರು ನುಡಿದರು.
ಈಗಾಗಲೇ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿಣ್ಣರ ವನ ದರ್ಶನ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶ ವಿವರಿಸಿದ ಅವರು, ಹಸಿರು ಶಾಲೆ, ಹಸಿರು ಗ್ರಾಮ, ಹಸಿರು ಹಳ್ಳಿಗಳನ್ನು ಮಾದರಿಯಾಗಿ ನಿರ್ಮಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ಡೀಮ್ಡ್ ಫಾರೆಸ್ಟ್, ಅರಣ್ಯದಿಂದ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಗಳು ಪರಿಸರಕ್ಕೆ ಪೂರಕವಾಗಿಯೇ ಹೊರತು ಜನರಿಗೆ ತೊಂದರೆ ಕೊಡಲು ಅಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು. ಅರಣ್ಯೀಕರಣ ಯೋಜನೆಯಡಿ ಬಿಲ್ಲಾಡಿ ಗ್ರಾಮಪಂಚಾಯತಿ ಸಹಕಾರಕ್ಕೆ ಅರಣ್ಯ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು. ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್‍ಚಂದ್ರ ಶೆಟ್ಟಿ ವಂದಿಸಿದರು. ವಂಡಾರು ಶಾಲಾ ಮಕ್ಕಳು ಶ್ರೀಗಂಧ ಸಸಿಗಳು ನೆಡುವಿಕೆ ಹಾಗೂ ಸಚಿವರೊಂದಿಗೆ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇಲಾಖೆಯ ಅಧಿಕಾರಿಗಳು ಸಚಿವರೊಂದಿಗೆ ಕಾರ್ಯಕ್ರಮದಲ್ಲಿದ್ದರು.