ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ

Spread the love

ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ

ಉಡುಪಿ: ಭಟ್ಕಳ ಹಾಗೂ ಗಂಗೊಳ್ಳಿಯ ನಡುವೆ ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುತ್ತಿದ್ದ ಎರಡು ದೋಣಿಗಳು ಸಮುದ್ರ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕ್ಕಿ ಮುಳುಗಿ ಹೋಗಿದ್ದು, ದೋಣಿಯಲ್ಲಿದ್ದ 16 ಮಂದಿ ಮೀನುಗಾರರನ್ನು ರಕ್ಷಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಮೀನುಗಾರಿಕೆ ದೋಣಿಗಳು ಭಟ್ಕಳದ ಗಂಗೊಳ್ಳಿ ನಡುವೆ ಮುಳುಗಡೆಯಾಗಿದೆ. ಎರಡು ಪ್ರತ್ಯೇಕ ದೋಣಿಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಯ ವೀಡಿಯೊ ಬಹಳ ರೋಚಕವಾಗಿದ್ದು, ಕಣ್ಣೆದುರೇ ಎರಡು ಕೋಟಿ ಬೆಲೆಯ ದೋಣಿಗಳು ಮುಳುಗಡೆಯಾಗಿದೆ.

ಅರಬ್ಬೀ ಸಮುದ್ರದಲ್ಲಿ ವಾತಾವರಣ ಏರುಪೇರಾದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವ-ಗಣೇಶ ದೋಣಿಯು ಸಂಜೆಯ ವೇಳೆಗೆ ತೀವ್ರವಾದ ಗಾಳಿ-ಮಳೆಯಿಂದಾಗಿ ಸಮುದ್ರದಲ್ಲಿ ನೀರಿನ ಅಲೆಗಳ ಆರ್ಭಟ ಜೋರಾಗಿದ್ದರಿಂದ ದೋಣಿಯಲ್ಲಿ ತೂತು ಬಿದ್ದು, ದೋಣಿ ಮುಳುಗಡೆಯಾಗಲು ಶುರುವಾಗಿದೆ. ದೋಣಿಯಲ್ಲಿದ್ದ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆಗೆ ಕರೆದಿದ್ದಾರೆ. ಕೂಡಲೇ ಮಲ್ಪೆಯಿಂದ ತೆರಳಿದ ದೋಣಿಗಳ ಮೂಲಕ ಮುಳುಗಡೆಯಾಗುತ್ತಿದ್ದ ದೋಣಿಯಿಂದ 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಗಿದೆ.

ಇದಲ್ಲದೇ ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಎಂಬ ದೋಣಿಯು ಗಂಗೊಳ್ಳಿ ಹಾಗೂ ಭಟ್ಕಳದ ನಡುವೆ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಮೀನುಗಾರರ ಮಾಹಿತಿಯಿಂದ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ದೋಣಿಯ ಮೀನುಗಾರರು 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ.


Spread the love