ಅರುಣ್ ಕುಮಾರ್ ಪುತ್ತಿಲ ಪರಿವಾರದಿಂದ ಪತ್ರಕರ್ತರ ಮೇಲೆ ಗೂಂಡಾಗಿರಿ: ಆರೋಪ
ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಪರಿವಾರದ ಕಾರ್ಯಕರ್ತನೊಬ್ಬ ದ.ಕ. ಬಿಜೆಪಿ ಜಿಲ್ಲಾ ಕಚೇರಿಯಲ್ಲೇ ಪತ್ರಕರ್ತರ ಮೇಲೆ ಶನಿವಾರ ಗೂಂಡಾಗಿರಿ ಎಸಗಿದ ಆರೋಪ ಕೇಳಿ ಬಂದಿದೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದು, ಈ ಸಂದರ್ಭ ಪುತ್ತಿಲ ಪರಿವಾರದ ಕಾರ್ಯಕರ್ತ ಸಂದೀಪ್ ಉಪ್ಪಿನಂಗಡಿ ಎಂಬಾತ ಗೂಂಡಾಗಿರಿ ಎಸಗಿರುವುದಾಗಿ ವರದಿಯಾಗಿದೆ.
ವರದಿ ಮಾಡಲು ಹೋದ ಮಾಧ್ಯಮದವರನ್ನು ತಳ್ಳಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿ ‘ಮಾಧ್ಯಮದವರು ಇಲ್ಲಿ ಯಾಕೆ ಬರುವುದು? ನಮಗೆ ಮಾಧ್ಯಮದವರ ಅಗತ್ಯವಿಲ್ಲ. ನಾವು ಒಂದಾಗಿ ಆಯಿತು’ ಎಂದು ಸಂದೀಪ್ ಉಪ್ಪಿನಂಗಡಿ ಹೇಳಿಕೊಂಡಿದ್ದಾನೆ.
ಕಳೆದ ಚುನಾವಣೆಯ ಸಂದರ್ಭ ಬಿಜೆಪಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ ಅರುಣ್ ಪುತ್ತಿಲ ಪರಿವಾರವು ಸಂಸದ ನಳಿನ್ ಕಟೀಲ್‌ಗೆ ಟಿಕೆಟ್ ಕೈ ತಪ್ಪುತ್ತಲೇ ಬಿಜೆಪಿ ಸೇರ್ಪಡೆಯ ಸುಳಿವು ನೀಡಿತ್ತು. ಅದರಂತೆ ಶನಿವಾರ ನಗರದ ಜಿಲ್ಲಾ ಕಚೇರಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಪರಿವಾರ ಬಿಜೆಪಿಗೆ ಸೇರ್ಪಡೆಗೊಳ್ಳುವಾಗಲೇ ಈ ಗೂಂಡಾಗಿರಿ ನಡೆದಿದೆ.