ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 2850 ಕೋಟಿ ರೂ.-ಐವನ್ ಡಿಸೋಜ
ಹಾಸನ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳ ಬಗ್ಗೆ ಸಮುದಾಯದ ಮುಖಂಡರು ಹಾಗೂ ಜನಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತರು ಮತ್ತು ಕ್ರೈಸ್ತ ಅಲ್ಪಸಂಖ್ಯಾತರ ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಉಪಾಧ್ಯಕ್ಷರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಪ್ರಾಯೋಜಿಸಿರುವ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತ ಪರಿಶೀಲನಾ ಉಪ ಸಮಿತಿಯ ಅಧ್ಯಕ್ಷರಾದ ಐವನ್ ಡಿಸೋಜ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ 2850 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು ಇದು ಸದ್ಭಳಕೆಯಾಗಬೇಕಾದರೆ ಯೋಜನಗಳನ್ನು ಕುರಿತು ಸಮುದಾಯದ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತರು ಮತ್ತು ಕ್ರೈಸ್ತ ಅಲ್ಪಸಂಖ್ಯಾತರ ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಉಪಾಧ್ಯಕ್ಷರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಕೌನ್ಸಿಲ್ ಪ್ರಾಯೋಜಿಸಿರುವ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತ ಪರಿಶೀಲನಾ ಉಪ ಸಮಿತಿಯ ಅಧ್ಯಕ್ಷರಾದ ಐವನ್ ಡಿಸೋಜ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗದ ವತಿಯಿಂದ ಅಲ್ಪಸಂಖ್ಯಾತರ ಕ್ರೈಸ್ತರಿಗಿರುವ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಮುದಾಯದ ಮುಖಂಡರುಗಳಿಗೆ ಏರ್ಪಡಿಸಲಾಗಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನವನ್ನು ಮೀಸಲಿರಿಸಿರುವ ರಾಜ್ಯವಾಗಿದೆ ಎಂದು ಹೇಳಿದರು.
2016-17ನೇ ಸಾಲಿಗೆ ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 125 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಈ ವರ್ಷ ೩೦೦ ಕೋಟಿ ರೂ.ಗಳ ಮನವಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿಗೆ 125 ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದು ೬ ತಿಂಗಳಲ್ಲಿ ಈ ಅನುದಾನವನ್ನು ವೆಚ್ಚ ಮಾಡಿದಲ್ಲಿ ಇನ್ನೂ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸುವುದಾಗಿ ಹೇಳಿದರು.
ಇದಲ್ಲದೆ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿನ ರಸ್ತೆ, ಮತ್ತಿತರ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 800 ಕೊಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಐವಾನ್ ಡಿಸೋಜ ತಿಳಿಸಿದರು.
ಅಲ್ಪಸಂಖ್ಯಾತ ಕ್ರೈಸ್ತ ಯುವಕರು ಸಶಕ್ತರಾಗಬೇಕಾದರೆ ಶಿಕ್ಷಣ ಹೆಚ್ಚು ಮುಖ್ಯ. ಅದಕ್ಕಾಗಿ ವಿದ್ಯಾರ್ಥಿ ವೇತನ, ಉನ್ನತ ವ್ಯಾಸಂಗ ಮಾಡುವವರಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಸಿ.ಇ.ಟಿ.ಮತ್ತು ಇಂಜಿನಿಯರಿಂಗ್ ತರಬೇತಿ ಮತ್ತು ಪ್ರವೇಶಗಳ ಸಂದರ್ಭದಲ್ಲಿ ಆರ್ಥಿಕ ನೆರವು ಕೆ.ಪಿ.ಎ.ಎಸ್ಸಿ ಮತ್ತು ಯು.ಪಿ.ಎಸ್.ಸಿ.ತರಬೇತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ ಅಲ್ಪಸಂಖ್ಯಾತರಿಗೆ ಸ್ವಾವಲಂಬನೆ, ಸಾಲ ಮತ್ತು ಸಹಾಯಧನ ಯೋಜನೆ, ಶಿಕ್ಷಣಕ್ಕಾಗಿ ಅರಿವು ವಿದ್ಯಾಭ್ಯಾಸ ಸಾಲ ಯೊಜನೆ, ಸಣ್ಣ ಸಾಲ ಮತ್ತು ಸಹಾಯಧನ ಯೊಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿ ಭೂಮಿ ಖರೀದಿ ಯೊಜನೆ, ಗೃಹ ನಿವೇಶನ ಖರೀದಿ ಯೋಜನೆ, ಹಾಗ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡುವ ಯೋಜನೆ, ಚರ್ಚ್‌ಗಳ ದುರಸ್ಥಿ ಮತ್ತು ಅಭಿವೃದ್ಧಿಗೆ ನೆರವು ಸಮುದಾಯ ಭವನಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯ ಕ್ರೈಸ್ತ ಸ್ಮಶಾನಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 10 ಲಕ್ಷಗಳ ವರೆಗೆ ಸಹಾಯಧನ ಶ್ರಮಶಕ್ತಿ ಯೋಜನೆ, ಮತ್ತಿತರ ಯೋಜನೆಗಳ ನೆರವುವನ್ನು ಭರಿಸಲಾಗುತ್ತಿದ್ದು ಅವುಗಳ ಬಗ್ಗೆ ಚರ್ಚ್‌ಗಳಿಗೆ ಬೇಟಿ ನೀಡಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಬೇಕು ಎಂದರು.
ಹಾಸನ ಜಿಲ್ಲೆಯಲ್ಲಿರುವ ಅತ್ಯಂತ ಪುರಾತನ ಚರ್ಚ್‌ಗಳಾಗಿರುವ ಶೆಟ್ಟಿಹಳ್ಳಿ ಮತ್ತು ಕಟ್ಟಾಯ ಚರ್ಚ್ ಗಳನ್ನು ಪುರಾತತ್ವ ಇಲಾಖೆಗೆ ವಹಿಸಬೇಕು ಅಥವಾ ಅದನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಚರ್ಚ್‌ಗಳ ಧರ್ಮಗುರುಗಳು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳನ್ನು ಸಿ.ಇ.ಟಿ.ಪರೀಕ್ಷೆಗೆ ಅಣಿಗೊಳಿಸಲು ಹಾಗೂ ಶುಲ್ಕ ಪಾವತಿಸಲು 20 ಕೋಟಿ ರೂ.ಗಳನ್ನು ಠೇವಣಿಸಲಾಗಿದೆ ಎಂದ ಐವನ್ ಡಿಸೋಜ ಅವರು ಮುಸ್ಲಿಂ ಸಮುದಾಯದಲ್ಲಿ ಹಜ್‌ಗೆ ತೆರಳಲು ಆರ್ಥಿಕ ನೆರವು ಒದಗಿಸುವ ಸ್ವರೂಪದಲ್ಲಿಯೇ ಕ್ರೈಸ್ತರಿಗೆ ಪವಿತ್ರ ಭೂಮಿ ಜೆರೂಸಲೇಂಗೆ ತೆರಳಲು ಆರ್ಥಿಕ ನೆರವು ಒದಗಿಸುವ ಯೋಜನೆ ಜಾರಿಗೂ ಚಿಂತಿಸಲಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಶಾಸಕರಾದ ಹೆಚ್.ಎಸ್.ಪ್ರಕಾಶ್, ಮಾತನಾಡಿ ಅಲ್ಪಸಂಖ್ಯಾತರ ಸಮುದಾಯಗಳಲ್ಲೇ ಬೇರೆ ಬೇರೆ ರೀತಿಯ ವೃತ್ತಿಗಳನ್ನು ಅನುಸರಿಸುವವರಿದ್ದಾರೆ. ಹಾಗಾಗಿ ಕ್ರೈಸ್ತ ಅಲ್ಪಸಂಖ್ಯಾತರಿಗೆ ಹೊಂದುವಂತಹ ವೃತಿ ಕೌಶಲ್ಯ ತರಬೇತಿಗಳಿಗೆ ಯೋಜನೆ ನೀಡಬೇಕು ಎಂದರು.
ಹಾಸನ ನಗರದ ಸ್ಲೇಟರ್‍ಸ್ ಹಾಲ್ ಸಮುದಾಯ ಭವನಗಳ ನಿರ್ಮಾಣಕ್ಕೆ ಕನಿಷ್ಟ 2 ಕೋಟಿ ರೂ.ಗಳ ಆರ್ಥಿಕ ನೆರವು ನೀಡಬೇಕು. ಕ್ರೈಸ್ತ ಸಮುದಾಯಗಳಿಗೆ ದೊರೆಯುವ ವೈಯಕ್ತಿಕ ನೆರವುಗಳ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಮಾತನಾಡಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಕಲ್ಯಾಣ ಇಲಾಖೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಆದರೂ ಅಲ್ಪಸಂಖ್ಯಾತರ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತ ದೇವರಾಜ್ ಅವರು ಮಾತನಾಡಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಲಾಗಿರುವ ಯೋಜನೆಗಳನ್ನು ಆ ಸಮುದಾಯಗಳು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಿಂದೆಂದಿಗಿಂತಲೂ ಹೆಚ್ಚು ಅನುದಾನ ಒದಗಿಸುತ್ತಿದ್ದಾರೆ. ಅವುಗಳನ್ನು ಬಳಸಿಕೊಂಡು ಸಮುದಾಯದ ಸಂಪನ್ಮೂಲಗಳನ್ನು ಗಟ್ಟಿಗೊಳಿಸುವ ಪ್ರಯತ್ನಗಳಾಗಬೇಕು ಎಂದರು.
ಕ್ರೈಸ್ತ ಅಭಿವೃದ್ಧಿ ಕೌನ್ಸಿಲ್ ಸದಸ್ಯರಾದ ಬಾಲರಾಜ್ ಮತ್ತು ಮರಿಯಪ್ಪ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು