ಅಲ್ಪಸಂಖ್ಯಾತರ ಆತಂಕ ನೀಗಿಸಲು ಎಸ್ಸೆಸ್ಸಫ್ ಮನವಿ
ಮಂಗಳೂರು: ಅಲ್ಪಸಂಖ್ಯಾತರಲ್ಲಿ, ವಿಶೇಷತಃ ಮುಸಲ್ಮಾನರಲ್ಲಿ ಆತಂಕ ಮೂಡುವ ಹಲವಾರು ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಕಂಡು ಬರುತ್ತಿದ್ದು, ಇವುಗಳನ್ನು ನಿಯಂತ್ರಿಸಿ ಅಲ್ಪಸಂಖ್ಯಾತರಲ್ಲಿ ಸುರಕ್ಷಿತ ಭಾವನೆ ಮೂಡಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಶ್ರೀ ಜಾರ್ಜ್ ಕುರಿಯನ್ ರವರಲ್ಲಿ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಮನವಿ ಮಾಡಿದೆ.
ಎಸ್ಸೆಸ್ಸಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ನೇತೃತ್ವದ ನಿಯೋಗವು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಶ್ರೀಯುತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಗೋರಕ್ಷಣೆಯ ಹೆಸರಿನಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ಸಮಗ್ರ ತನಿಖೆಗೊಳಪಡಿಸಿ ನ್ಯಾಯ ಒದಗಿಸಬೇಕು, ಗೋಮಾಂಸ ನಿಷೇಧ ಪ್ರಸ್ತಾಪವನ್ನು ಕೈಬಿಟ್ಟು ಆಹಾರ ಸ್ವಾತಂತ್ರ್ಯವನ್ನು ಖಚಿತಪಡಿಸಬೇಕು. ಏಕ ಸಿವಿಲ್ ಕೋಡ್ ಪ್ರಸ್ತಾಪವನ್ನು ಹಿಂದೆಗೆದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಬೇಕು,
ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಧಾರ್ಮಿಕ ವಿದ್ವಾಂಸರೊಂದಿಗೆ ಚರ್ಚಿಸಿ ಶರೀಅತ್ ನಿಯಮಗಳನುಸಾರ ಮುಂದುವರಿಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ ನಿಯೋಗವು ಮ್ಯಾನ್ಮಾರ್ ನಿರಾಶ್ರಿತರ ಮೇಲೆ ಮಾನವೀಯ ಕಾಳಜಿಯಿಂದ ಸಹಾನುಭೂತಿ ತೋರಬೇಕೆಂದು ಆಗ್ರಹಿಸಿತು.
ಹಿಂದಿನ ಯು.ಪಿ.ಎ ಸರ್ಕಾರ ವು ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಯನ್ನು ಘೋಷಿಸಿತ್ತು. ಹಾಲಿ ಸರ್ಕಾರ ಅದರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಲಾಗಿದೆ.
ಎಸ್ ವೈ ಎಸ್ ರಾಜ್ಯ ನಾಯಕ ಜಿ.ಎಂ ಕಾಮಿಲ್ ಸಖಾಫಿ ,ಎಸ್ಸೆಸ್ಸಫ್ ಮಾಜಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಪ್ರಿಂಟೆಕ್ ,ಪ್ರಮುಖರಾದ ಅಬ್ದುಲ್ ರಶೀದ್ ಹಾಜಿ ಪಾಂಡೇಶ್ವರ ,ಬಿ.ಎಸ್ ಇಸ್ಮಾಯಿಲ್ ಕುತ್ತಾರ್ ನಿಯೋಗದಲ್ಲಿದ್ದರು.