ಅಲ್ಪ ಸಂಖ್ಯಾತರ ಆಯೋಗ: ರಾಜ್ಯ ಮಟ್ಟದ ಸಲಹಾ ಸಮಿತಿ ರಚನೆ: ಜಿ.ಎ. ಬಾವಾ
ಉಜಿರೆ: ಸರ್ಕಾರದ ವಿವಿಧ ಇಲಾಖೆಗಳಿಂದ ಅಲ್ಪ ಸಂಖ್ಯಾತರಿಗೆ ದೊರಕುವ ಅನೇಕ ಸೌಲಭ್ಯಗಳನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ. ಬಾವಾ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಆಯೋಗದ ಅಧ್ಯಕ್ಷನಾಗಿ ಸಮಾಜದ ಋಣ ತೀರಿಸುವ ಅವಕಾಶ ತನಗೆ ದೊರಕಿದೆ. ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ಸದ್ಯದಲ್ಲಿಯೇ ರಚಿಸಲಾಗುವುದು ಎಂದು ಅವರು ತಿಳಿಸಿದರು.
ಶಿಕ್ಷಣದ ಸಂದರ್ಭ ತನಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ ಹೆಗ್ಗಡೆಯವರ ನೆರವನ್ನು ಅವರು ಧನ್ಯತೆಯಿಂದ ಸ್ಮರಿಸಿದರು.
ವಕ್ಫ್ ಮಂಡಳಿಯ ಜಾಗವನ್ನು ಮಾರಾಟ ಮಾಡುವ ಅಥವಾ ವರ್ಗಾವಣೆ, ಪರಾಭಾರೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಕಾನೂನು ಮೂಲಕ ಈಗಾಗಲೆ ಸೂಕ್ತ ಕ್ರಮ ತೆಗೆದುಕೊಂಡಿದ್ದು ಜಾಗವನ್ನು ಮರಳಿ ವಕ್ಫ್ ಮಂಡಳಿಗೆ ಪಡೆಯಲಾಗುವುದು. ಈ ಬಗ್ಯೆ ಸರ್ವೆ ಕಾರ್ಯ ನಡೆಸಲಾಗಿದೆ ಎಂದು ಅವರು ತಿಳಿಸಿದರು.