ಅವಿಭಜಿತ ದಕ ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಸಾಗರೋತ್ಪನ್ನ ಆಯ್ಕೆ : ಯಶ್ಪಾಲ್ ಸುವರ್ಣ ಸ್ವಾಗತ
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಕಲ್ಪನೆಗೆ ಬಲತುಂಬುವ ನಿಟ್ಟಿನಲ್ಲಿ ರೂಪಿಸಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಾಗರೋತ್ಪನ್ನಗಳನ್ನು ಆಯ್ಕೆ ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿರುವ ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಅವಳಿ ಜಿಲ್ಲೆಗಳ ಉತ್ಪನ್ನವಾಗಿ ಸಾಗರೋತ್ಪನ್ನವನ್ನು ಆಯ್ಕೆಮಾಡುವ ಮೂಲಕ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಆಯಾಯ ಜಿಲ್ಲೆಯ ವೈವಿಧ್ಯ ಮತ್ತು ಕಸುಬುಗಳಿಗೆ ಈ ಯೋಜನೆಯಡಿ ಪರಿಗಣಿಸುವುದರಿಂದ ಕರಾವಳಿ ಜಿಲ್ಲೆಯ ಪ್ರಮುಖ ವೃತ್ತಿಯಾದ ಮೀನುಗಾರಿಕೆಯ ಸಾಗರೋತ್ಪನ್ನಗಳನ್ನು ಆಯ್ಕೆಮಾಡಿರುವುದು ಅತ್ಯಂತ ಪ್ರಸ್ತುತವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಯನ್ನು ನೇರವಾಗಿ ಅವಲಂಬಿಸಿರುವ ಸುಮಾರು 1 ಲಕ್ಷ ಮೀನುಗಾರರ ಜೊತೆ ಜೊತೆಗೆ ಟೆಂಪೋ, ರಿಕ್ಷಾ ಚಾಲಕರು, ಲಾರಿ ಚಾಲಕರು, ಐಸ್ಪ್ಲಾಂಟ್, ಮೆಕ್ಯಾನಿಕ್, ಎಲೆಕ್ಟ್ರೀಶಿಯನ್, ಬೋಟ್ ನಿರ್ಮಾಣ ಕಾರ್ಮಿಕರು, ಕನ್ನಿ ಪಾರ್ಟಿ, ಬಂದರಿನಲ್ಲಿ ದುಡಿಯುವ ಕೂಲಿ ಕಾರ್ಮಿಕರು, ಫಿಶ್ಮಿಲ್, ಮೀನು ಸಂಸ್ಕರಣ ಘಟಕ, ಕಟ್ಟಿಂಗ್ ಶೆಡ್, ಮಹಿಳಾ ಮೀನುಗಾರರು ಸಹಿತ ಸುಮಾರು 80 ಸಾವಿರ ಕಾರ್ಮಿಕರು ಪರೋಕ್ಷವಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರದಿಂದ ಮೀನುಗಾರರಲ್ಲಿ ಆತ್ಮ ನಿರ್ಭರ ಭಾರತದ ಕಲ್ಪನೆಗೆ ಹೊಸ ಚೈತನ್ಯ ತುಂಬಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೀನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸಹಿತ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ ಈ ಯೋಜನೆಯಿಂದ ಇನ್ನಷ್ಟು ಪ್ರಯೋಜನ ದೊರೆಯಲಿದೆ. ಈ ಎಲ್ಲಾ ಯೋಜನೆಗಳ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಹಾಗೂ ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.