ಅಸಹಾಯಕ ಮಹಿಳೆಯ ರಕ್ಷಿಸಿದ ಸಾಮಾಜಿಕ ಕಾರ್ಯಕರ್ತರ ತಂಡ

Spread the love

ಅಸಹಾಯಕ ಮಹಿಳೆಯ ರಕ್ಷಿಸಿದ ಸಾಮಾಜಿಕ ಕಾರ್ಯಕರ್ತರ ತಂಡ
ಉಡುಪಿ: ನಗರದ ಹೊರ ವಲಯದ ಉದ್ಯಾವರ ಪ್ರದೇಶದಲ್ಲಿ ಅಪರಿಚಿತ ಮಾನಸಿಕ  ಮಹಿಳೆಯೊರ್ವರು  ಸುತ್ತಾಡುವುದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ ಘಟನೆ ಗುರುವಾರ ಸಂಜೆ ನಡೆದದ್ದು ಬೆಳಕಿಗೆ ಬಂದಿದೆ.
ಅಸಹಾಯಕ ಮಹಿಳೆಗೆ ಸುಮಾರು 45 ವರ್ಷ, ಕುಂದಗನ್ನಡ ಭಾಷೆ ಮಾತನಾಡುತ್ತಾರೆ. ಕುಂದಾಪುರ ಭಾಗದವರೆಂದು ಶಂಕಿಸಲಾಗಿದೆ. ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವಾಗ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ನೀಡುವ ಹಸಿರು ವಸ್ತ್ರದಲ್ಲಿ ಕಂಡು ಬಂದಿದ್ದಾರೆ. ಆ ಮೂಲಕ ಆಕೆ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ರೋಗಿ ಎಂದು ಸ್ಥಳಿಯರು ಶಂಕಿಸಿ, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ, ರಾಮದಾಸ್ ಪಾಲನ್ ಸೇರಿ ಜೊತೆಗೂಡಿದ ಸಾಮಾಜಿಕ ಕಾರ್ಯಕರ್ತರು, ಆಶಾ ಕಾರ್ಯಕರ್ತೆ ಅನಿತಾ ಯು ಪಾಲನ್, ಅವರ ಸಹಕಾರ ಪಡೆದು, ಮಾನಸಿಕ ಮಹಿಳೆಯನ್ನು ವಶಕ್ಕೆ ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ನಂತರ ಆಸ್ಪತ್ರೆಯ ದಾದಿಗಳು ಮಾನಸಿಕ ಮಹಿಳೆ  ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದವಳೆಂದು ಗುರುತಿಸಿದ್ದಾರೆ. ಮಹಿಳೆ ತನ್ನ ಹೆಸರು ಪದ್ಮ, ಕುಂದಾಪುರದ ಅರಾಟೆ ಎಂದು ವಿಳಾಸ ನೀಡಿದ್ದಾರೆ. ವಾರಸುದಾರರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸಾಮಾಜಿಕ ಕಾರ್ಯಕರ್ತರ ಪ್ರಕಟಣೆ ತಿಳಿಸಿದೆ. ಮಹಿಳೆ ಉಡುಪಿಗೆ ಹೇಗೆ ಬಂದರು ಎನ್ನುವುದು ತಿಳಿದು ಬಂದಿಲ್ಲವಾಗಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ಪ್ರತೇಕ ವಾರ್ಡ್ ಇಲ್ಲದೆ ಸಮಸ್ಯೆ ಎದುರಾಗಿದೆ. ಮಾನಸಿಕ ರೋಗಿಗಳನ್ನು ಸಾಮಾನ್ಯ ರೋಗಿಗಳಿರುವ ವಾರ್ಡಿನಲ್ಲಿ ದಾಖಲು ಪಡಿಸುತ್ತಿದ್ದಾರೆ. ಇದೊಂದು ವೈದ್ಯಶಾಸ್ತ್ರಕ್ಕೆ ವಿರುದ್ದವಾದ ಪ್ರಕ್ರೀಯೆ ಆಗಿದೆ. ಈ ಅವ್ಯವಸ್ಥೆಯಿಂದಾಗಿ ಮಾನಸಿಕ ರೋಗಿಗಳಿಂದ ಇತರ ರೋಗಿಗಳ ಮೇಲೆ ಹಲ್ಲೆ, ದಾದಿಗಳ ಮೇಲೆ ಹಲ್ಲೆ, ವೈದ್ಯರ ಮೇಲೂ ಹಲ್ಲೆ ನಡೆಯುವ ಸಾದ್ಯತೆ ಇರುತ್ತದೆ. ಮಾನಸಿಕ ರೋಗಿಗಳ ಕಿರುಚಾಟಗಳಿಂದ ಇತರ ರೋಗಿಗಳಿಗೆ ನಿದ್ರಾ ಭಂಗವು ಆಗುತ್ತದೆ. ಮಾನಸಿಕರು ತಪ್ಪಿಸಿ ರಸ್ತೆಗೆ ಹೋಗುವ ಪ್ರಕರಣಗಳು ಕಂಡು ಬಂದಿವೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯ ಸಮಸ್ಯೆಯತ್ತ ಗಮನ ಹರಿಸಿ, ಮಾನಸಿಕ ರೋಗಿಗಳಿಗೆ ಪ್ರತೇಕವಾದ ವ್ಯವಸ್ಥಿತ ವಾರ್ಡು ನಿರ್ಮಾಣ ಮಾಡ ಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹ ಪಡಿಸಿದ್ದಾರೆ.

Spread the love