ಅಸೌಖ್ಯದಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ಬಂದ ಮೂನ್‌ಸ್ಟಾರ್ ರವಿ ಕಟಪಾಡಿ

Spread the love

ಅಸೌಖ್ಯದಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ಬಂದ ಮೂನ್‌ಸ್ಟಾರ್ ರವಿ ಕಟಪಾಡಿ

ಕಟಪಾಡಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಲ್ಕು ವರ್ಷಗಳಿಂದ ವಿಭಿನ್ನ ಬಗೆಯ ವೇಷ ಧರಿಸಿ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹ ಮಾಡುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಅಮೆಝಾನ್ ಮೂನ್‌ಸ್ಟಾರ್ ವೇಷದಲ್ಲಿ ಜನರ ಗಮನ ಸೆಳೆದಿದ್ದಾರೆ.

45 ದಿನಗಳಿಂದ ಈ ವೇಷಕ್ಕಾಗಿ ಪೂರ್ವ ತಯಾರಿ ನಡೆದಿದ್ದು, ಸುಮಾರು 30 ಗಂಟೆ ಪರಿಶ್ರಮದ ಅನಂತರ ಮೂನ್‌ಸ್ಟಾರ್ ಮೂಡಿ ಬಂದಿದೆ.

ಕಂದಮ್ಮಗಳ ಚಿಕಿತ್ಸೆಗೆ ನೆರವು: ನಾಲ್ಕು ವರ್ಷಗಳಲ್ಲಿ ಹಲವು ಮಕ್ಕಳ ಚಿಕಿತ್ಸೆಗೆ 15 ಲಕ್ಷ ರೂ. ವಿತರಿಸಿರುವ ರವಿ ಕಟಪಾಡಿ ತಂಡ ಈ ಬಾರಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಾರಂಬಳ್ಳಿ ಉಪ್ಪಿನಕೋಟೆ ಉಮೇಶ್ ಕುಂದರ್ ಮಗಳಾದ ದೀಕ್ಷಾ ಯು.(4), ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ಕೋಡಿಯ ಹಂಝ ಎಂಬುವರ ಪುತ್ರ ಜುಲ್ಫಿನ್(13), ತಲೀಮಿಯ ಕಾಯಿಲೆಯಿಂದ ಬಳಲುತ್ತಿರುವ ಉಡುಪಿ ಜಗದೀಶ್ ಎಂಬುವರ ಮಗಳು ಪನ್ವಿಕಾ(2) ಮತ್ತು ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕುಂದಾಪುರ ಆನಗಳ್ಳಿಯ ರವಿರಾಜ ಎಂಬುವರ ಪುತ್ರ ರಜತ್(10) ಚಿಕಿತ್ಸೆಗೆ ನೆರವಾಗಲು ಅಷ್ಟಮಿ ವೇಷದ ಮೂಲಕ ಕಾಪು, ಕಟಪಾಡಿ, ಶಂಕರಪುರ, ಉಡುಪಿ, ಮಲ್ಪೆ, ಮಣಿಪಾಲದ ವಿವಿಧೆಡೆ ಹಣ ಸಂಗ್ರಹಿಸುತ್ತಿದೆ.

1.20 ಲಕ್ಷ ರೂ.ನ ಮೂನ್‌ಸ್ಟಾರ್: ಪ್ರತಿವರ್ಷ ವಿಶೇಷ ವೇಷದ ಮೂಲಕ ಗಮನ ಸೆಳೆಯುವ ರವಿ ಕಟಪಾಡಿ ಈ ಬಾರಿ ತಮ್ಮ ಮೂನ್‌ಸ್ಟಾರ್ ವೇಷಕ್ಕಾಗಿ 1.20 ಲಕ್ಷ ರೂ. ಖರ್ಚು ಮಾಡಿದ್ದಾರೆ. ವೇಷಕ್ಕೆ ಬೇಕಾಗುವ ವಸ್ತು ಸಲಕರಣೆಗಳನ್ನು ವಿದೇಶದಿಂದ ತರಿಸಲಾಗಿದೆ. ವೇಷ ಅದ್ಭುತವಾಗಿ ಮೂಡಿಬಂದಿದ್ದು, ಹೋದ ಕಡೆಗಳಲ್ಲೆಲ್ಲ ಜನರು ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ.

9ರಂದು ಧನ ಸಹಾಯ ವಿತರಣೆ: ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ಎರಡು ದಿನ ಉಡುಪಿ, ಕಟಪಾಡಿ, ಮಲ್ಪೆ ಸುತ್ತುಮುತ್ತ ಜನರಿಂದ ಸಂಗ್ರಹಿಸಿದ ಹಣವನ್ನು ಸೆ.9ರಂದು ಮಲ್ಪೆ ಶ್ರೀಹನುಮಾನ್ ವಿಠೋಭಾ ಭಜನಾ ಮಂದಿರದದಲ್ಲಿ ಮಧ್ಯಾಹ್ನ 4ಕ್ಕೆ ಕೇಮಾರು ಶ್ರೀ ಈಶ ವಿಠಲ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಪ್ರಿಯಂಕಾ ಮೇರಿ ಫ್ರಾನ್ಸಿಸ್ ಮತ್ತು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಗುವುದು ಎಂದು ವೇಷಧಾರಿ ರವಿ ಕಟಪಾಡಿ ತಿಳಿಸಿದ್ದಾರೆ.


Spread the love