ಅ.29; ಕೋಟದಲ್ಲಿ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡಾಕೂಟ ಹೊಳಪು – 2017
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮ, ಪಟ್ಟಣ, ನಗರ ಹಾಗೂ ಜಿಲ್ಲಾ ಪಂಚಾಯತ್ ಸಹಿತ ಸ್ಥಳೀಯ ಆಡಳಿತದ ಸದಸ್ಯರಿಗಾಗಿ ಅ. 29ರಂದು ಉಡುಪಿ ಜಿಲ್ಲೆ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಳಪು-2017 ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದರು.
ಕ್ರೀಡಾಕೂಟದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 4,000 ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಲ್ಲಿಯವರೆಗೆ 270 ಸ್ಥಳೀಯಾಡಳಿತ ಸಂಸ್ಥೆಗಳು ಪ್ರವೇಶ ಪತ್ತರವನ್ನು ಕಳುಹಿಸಿದೆ. 100 ಮೀಟರ್ ಓಟ, ಗುಂಡು ಎಸೆತ, ರಿಂಗ್ ಇನ್ ದಿ ವಿಕೆಟ್ (ವಿಕೆಟ್‌ಗೆ ರಿಂಗ್ ಹಾಕುವುದು). ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಾಯನ, ಛದ್ಮವೇಷ, ರಸಪ್ರಶ್ನೆ ಇರುತ್ತವೆ. 160 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ 7.30ಕ್ಕೆ ಕ್ರೀಡಾಜ್ಯೋತಿ ಕಾರಂತ ಥೀಂ ಪಾರ್ಕಿನಿಂದ ಹೊರಟು ಕ್ರೀಡಾಂಗಣಕ್ಕೆ ಆಗಮಿಸಲಿದೆ. ನಂತರ 8.30ಕ್ಕೆ 270 ಗ್ರಾಮ ಪಂಚಾಯತ್ಗಳ ಪಥ ಸಂಚಲನ ಕಾರ್ಯಕ್ರಮ ನಡೆಯಲಿದ್ದು ಪಥ ಸಂಚಲನದಲ್ಲಿ ಜಯಗಳಿಸಿದ ತಂಡಕ್ಕೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಪಥಸಂಚಲನ ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಧ್ವಜ ವಂದನೆ ನೆರವೇರಿಸಲಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಆರೋಗ್ಯ ಸಚಿವ ಯು.ಟಿ. ಖಾದರ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಸಹಿತ ಎರಡು ಜಿಲ್ಲೆಗಳ ಶಾಸಕರು, ಜಿ.ಪಂ. ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಗ್ಗಜಗ್ಗಾಟ, ತ್ರೋಬಾಲ್ ಮತ್ತು ಇತರ ಪಂದ್ಯಾವಳಿಗಳು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಭಾಗವಹಿಸಿದ ಎಲ್ಲಾ ಪಂಚಾಯತುಗಳಿಗೆ ಸ್ಮರಣಿಕೆ ನೀಡಲಾಗುತ್ತದೆ. ವಿಜೇತ ತಂಡಗಳಿಗೆ ಪ್ರಶಸ್ತಿ ಮತ್ತು ಮೆಡಲ್ ನೀಡಲಾಗುತ್ತದೆ ಎಂದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕ್ರೀಡಾಕೂಟದ ಟಿ ಶರ್ಟ್ ಮತ್ತು ಟೊಪ್ಪಿಯನ್ನು ಬಿಡುಗಡೆಗೊಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.