ಆಗಸ್ಟ್ 15ರ ವೇಳೆಗೆ ಕರ್ನಾಟಕದಲ್ಲಿ 25 ಸಾವಿರ ಕೊರೋನಾ ಸೋಂಕಿತರು!: ವಾರ್ ರೂಮ್ ಮುಖ್ಯಸ್ಥರ ಅಂದಾಜು
ಬೆಂಗಳೂರು: ಆಗಸ್ಟ್ 15ರ ವೇಳೆಗೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಪ್ರಮಾಣ ಶೇ.4ರಷ್ಟಿದ್ದು, ಇದರ ಅಂದಾಜಿನ ಮೇರೆಗೆ ರಾಜ್ಯದಲ್ಲಿ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರ ದಾಟುವ ಸಾಧ್ಯತೆ ಇದೆ. ಜನ ಸಾಮಾನ್ಯರು ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಗಳನ್ನು ಕಡ್ಟಾಯವಾಗಿ ಬಳಕೆ ಮಾಡುವುದು, ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುವುದನ್ನು ಮಾಡುವುದರಿಂದ ಸೋಂಕು ಪ್ರಸರಣದ ವೇಗವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ನಿತ್ಯ ಸೋಂಕಿತರ ಸಂಖ್ಯೆ ಪ್ರಮಾಣ ಶೇ.3ರಷ್ಟಿದ್ದು, ಈ ವೇಗದಲ್ಲಿ ಅಂದಾಜಿಸುವುದಾದರೆ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 17 ಸಾವಿರ ಗಡಿ ದಾಟಬಹುದು. ಒಂದು ವೇಳೆ ಈ ಪ್ರಮಾಣ ಶೇ.4ಕ್ಕೆ ಏರಿಕೆಯಾದರೆ ಆಗ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 25 ಸಾವಿರವಾಗುತ್ತದೆ. ಈ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಿಲ್ಲವಾದರೂ, ಹಾಲಿ ಸೋಂಕಿನ ವೇಗ ಮತ್ತು ಪ್ರಸರಣದ ಅಂದಾಜಿನ ಮೇಲೆ ಈ ಅಂಕಿ ಅಂಶ ನೀಡಲಾಗಿದೆ. ಹೀಗಾಗಿ ಮುಂದಿನ 50-60 ದಿನಗಳು ನಮಗೆ ಮುಖ್ಯವಾಗಿರುತ್ತದೆ. ಜನ ಈ ಸಂದರ್ಭದಲ್ಲಿ ಜಾಗರೂಕರಾಗಿ ವರ್ತಿಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಆದ ತಪ್ಪುಗಳು ಮರುಕಳಿಸಬಾರುದು. 24 ಗಂಟೆಗಳ ಅವಧಿಯೊಳಗೇ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡಬೇಕು. ಅಲ್ಲದೆ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಬೇಕು. ಕೊರೋನಾ ಟೆಸ್ಟ್ ಗಳ ವೇಗ ಹೆಚ್ಚಿಸಬೇಕು ಎಂದು ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದ್ದು, ಈ ಪೈಕಿ 5,618 ಮಂದಿ ಗುಣಮುಖರಾಗಿದ್ದು, 3,391 ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಒಟ್ಟು 137 ಮಂದಿ ಸಾವನ್ನಪ್ಪಿದ್ದಾರೆ. ನಿತ್ಯ ಸೋಂಕಿತರ ಏರಿಕೆ ಪ್ರಮಾಣ ಶೇ.4ರಷ್ಟಿದೆ.